ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ಧತಿ ನಿರ್ಣಯವನ್ನು ವಿರೋಧಿಸಿ ಹೊರಡಿಸಲಾಗಿದ್ದ ಗುಪ್ಕರ್ ಘೋಷಣೆಯ ಕಾರ್ಯಸೂಚಿಗಳ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಗುಪ್ಕರ್ ಘೋಷಣೆ ಒಕ್ಕಟವು 370ನೇ ವಿಧಿಯನ್ನು ಪುನಃ ಸ್ಥಾಪಿಸುವುದನ್ನು ತನ್ನ ಕಾರ್ಯಸೂಚಿಯಾಗಿ ಘೋಷಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಸೇರಿದಂತೆ ಕೆಲವು ಕಾನೂನುಗಳನ್ನು ಜಾರಿಗೆ ತರುವುದನ್ನು ಅವರು ಬಯಸುವುದಿಲ್ಲ. ಇದರಿಂದ ಅವರು ಭ್ರಷ್ಟಾಚಾರವನ್ನು ಮುಂದುವರಿಸಬಹುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಕಾಂಗ್ರೆಸ್, ಪೀಪಲ್ಸ್ ಕಾನ್ಫರೆನ್ಸ್, ಸಿಪಿಎಂ ಮತ್ತು ಎಎನ್ ಸೇರಿ ಪ್ರಮುಖ ಪಕ್ಷಗಳು ಒಗ್ಗೂಡಿ ಮಹತ್ವದ ಗುಪ್ಕರ್ ಘೋಷಣೆ ಮಾಡಿಕೊಂಡಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯನ್ನು ಮರಳಿ ತರುವ ಮೂಲಕ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯುವುದು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಭಜನೆ ರದ್ದುಗೊಳಿಸಿ ಪುನಃ ಜಮ್ಮು ಮತ್ತು ಕಾಶ್ಮೀರ ರಾಜ್ಯ ಅಸ್ತಿತ್ವಕ್ಕೆ ತರವುದೇ ಇದರ ಮುಖ್ಯ ಉದ್ದೇಶವಾಗಿದೆ.
ಮುಖ್ಯಮಂತ್ರಿಗಳಾಗಿ ಇರುವವರು 370ನೇ ವಿಧಿಯನ್ನು ಪುನಃ ಸ್ಥಾಪಿಸಲು ಚೀನಾದ ನೆರವು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ರಾಷ್ಟ್ರ ವಿರೋಧಿ ಚಟುವಟಿಕೆ. ಆರ್ಟಿಕಲ್ 370ರ ಪುನಃಸ್ಥಾಪನೆ ಕುರಿತು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ತಾಕೀತು ಮಾಡಿದ್ದಾರೆ.