ನವದೆಹಲಿ: ತೀವ್ರ ನಿರೀಕ್ಷೆಯ 137 ವರ್ಷಗಳ ಇತಿಹಾಸವಿರುವ ಹಳೆಯ ಪಕ್ಷ ಕಾಂಗ್ರೆಸ್ ಹೊಸ ಅಧ್ಯಕ್ಷರ ಪಡೆಯುವ ಹುಮ್ಮಸ್ಸಿನಲ್ಲಿದೆ. ಅದರಲ್ಲೂ 24 ವರ್ಷಗಳ ಬಳಿಕ ಗಾಂಧಿಯೇತರ ವ್ಯಕ್ತಿಯೊಬ್ಬರು ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ. ಅಧ್ಯಕ್ಷ ರೇಸ್ನಲ್ಲಿರುವ ಹಿರಿಯ ನಾಯಕರಾದ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ಶಶಿ ತರೂರ್ ನಡುವೆ ಯಾರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ದೇಶಾದ್ಯಂತ ಕಾಂಗ್ರೆಸ್ ಕಚೇರಿಗಳಲ್ಲಿ ಅ.17 ರಂದು ನಡೆದ ಚುನಾವಣೆಯ ಬಳಿಕ ಎಲ್ಲಾ ಮತಪೆಟ್ಟಿಗೆಗಳನ್ನು ದೆಹಲಿಗೆ ತರಲಾಗಿದ್ದು, ಕೇಂದ್ರ ಕಚೇರಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನ 3 ಅಥವಾ 4 ಗಂಟೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ಮಲ್ಲಿಕಾರ್ಜುನ ಖರ್ಗೆ ಫೇವರೇಟ್: ಅಧ್ಯಕ್ಷ ಸ್ಪರ್ಧೆಯಲ್ಲಿರುವ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ಖಚಿತ ಎನ್ನಲಾಗ್ತಿದೆ. ಪಕ್ಷದ ನೆಚ್ಚಿನ ಅಭ್ಯರ್ಥಿ ಎಂದೇ ಅವರನ್ನು ಬಿಂಬಿಸಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಪಕ್ಷದ ಹಲವು ನಾಯಕರು ಖರ್ಗೆ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದರು.
ಇನ್ನು, ಕೇರಳದ ಹಿರಿಯ ಕಾಂಗ್ರೆಸ್ಸಿಗ ಶಶಿ ತರೂರ್ ಈ ಬಗ್ಗೆ ಬೇಸರ ಕೂಡ ವ್ಯಕ್ತಪಡಿಸಿದ್ದರು. ತಮ್ಮ ಪ್ರಚಾರ ಸಭೆಗಳಿಗೆ ಕಾಂಗ್ರೆಸ್ ನಾಯಕರು ಬರುವುದಿಲ್ಲ. ಖರ್ಗೆ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಇಂದಿನ ಫಲಿತಾಂಶ ಕರ್ನಾಟಕದ ನಾಯಕನ ಪರವಾಗಿಯೇ ಬರಲಿದೆ ಎಂಬುದು ಬಹುತೇಕ ಖಚಿತವಾಗಿದೆ.
24 ವರ್ಷಗಳ ಬಳಿಕ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬ ಕಣದಲ್ಲಿ ಇಳಿದಿಲ್ಲ. 2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ರಾಹುಲ್ ಗಾಂಧಿ ಅವರು ಸ್ಥಾನದಿಂದ ಕೆಳಗಿಳಿದರು. ನಂತರ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸೋನಿಯಾ ಗಾಂಧಿ ಅವರ ಸ್ಥಾನವನ್ನು ಹೊಸ ಅಧ್ಯಕ್ಷರು ವಹಿಸಲಿದ್ದಾರೆ.
ಮತ ಎಣಿಕೆಯ ವಿಧಾನ: ಇನ್ನು, ಮತ ಎಣಿಕೆಯ ವೇಳೆ ಪ್ರತಿ ಕಡೆಯವರಿಂದ ಐವರು ಏಜೆಂಟರು ಎಣಿಕೆ ಮೇಲ್ವಿಚಾರಣೆ ನಡೆಸಲಿದ್ದು, ಎರಡು ಕಡೆಯಿಂದ ಇಬ್ಬರು ಏಜೆಂಟ್‌ಗಳನ್ನು ಮೀಸಲು ಇಡಲಾಗುವುದು. ಚುನಾವಣೆಯಲ್ಲಿ 9,500 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ ಚಲಾಯಿಸಿದ್ದು, ಮತ ಎಣಿಕೆಗೆ 8 ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಟೇಬಲ್‌ನಲ್ಲಿ ಇಬ್ಬರು ವ್ಯಕ್ತಿಗಳು ಮತ ಎಣಿಕೆ ಮಾಡಲಿದ್ದಾರೆ.
ಮತ ಎಣಿಕೆಯ ನಂತರ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷರು ಫಲಿತಾಂಶ ಪ್ರಕಟಿಸಲಿದ್ದಾರೆ. ಜಯ ಗಳಿಸಿದ ಅಭ್ಯರ್ಥಿ ದೀಪಾವಳಿಯ ಬಳಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಈ ಮೊದಲು ಹೈಡ್ರಾಮಾವೇ ನಡೆದಿತ್ತು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈ ಹಿಂದೆ ಹುದ್ದೆಯ ಮುಂಚೂಣಿಯಲ್ಲಿದ್ದರು. ಆದರೆ, ರಾಜಸ್ಥಾನದಲ್ಲಿ ರಾಜಕೀಯ ಕಿತ್ತಾಟದಿಂದಾಗಿ ಅವರು ಸ್ಪರ್ಧೆಯಿಂದಲೇ ಹಿಂದೆ ಸರಿಯಬೇಕಾಗಿ ಬಂತು. ಸೋನಿಯಾ, ರಾಹುಲ್ ಸೇರಿದಂತೆ ಗಾಂಧಿ ಕುಟುಂಬವೇ ಇವರನ್ನು ಅಧ್ಯಕ್ಷರನ್ನಾಗಿ ಮಾಡಲು ಬಯಸಿತ್ತು.
ಓದಿ: ಕಾಂಗ್ರೆಸ್ ಸರ್ಕಾರದ ಎಲ್ಲ ಭ್ರಷ್ಟಾಚಾರ ದಾಖಲೆಯನ್ನು ರಾಹುಲ್ ಗಾಂಧಿಗೆ ಕಳುಹಿಸುವೆ: ಸಿಎಂ ಬೊಮ್ಮಾಯಿ