ನವದೆಹಲಿ: ಕರ್ನಾಟಕದಲ್ಲೂ ಪೆಗಾಸಸ್ ಸ್ಪೈವೇರ್ ಮೂಲಕ ರಾಜಕೀಯ ನಾಯಕರುಗಳ ಹ್ಯಾಕಿಂಗ್ ನಡೆದಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸುವ ಸಂಚು ರೂಪಿಸಿ ಸರ್ಕಾರ ಕೆಡವಿರುವುದು ಈಗ ಬಟಾಬಯಲಾಗಿದೆ. ಕರ್ನಾಟಕ ಮಾತ್ರವಲ್ಲ, ಮಧ್ಯಪ್ರದೇಶ, ಗೋವಾ, ಅರುಣಾಚಲ ಪ್ರದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಬಿಜೆಪಿಯವರು ಕೆಡವಿದ್ದಾರೆ. ಹೀಗಾಗಿ ಒಂದೇ ಒಂದು ಕ್ಷಣವೂ ಮೋದಿ ಮತ್ತು ಅಮಿತ್ ಶಾ ಅಧಿಕಾರದಲ್ಲಿ ಇರಬಾರದು ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಚುನಾಯಿತ ಸರ್ಕಾರಗಳನ್ನು ಕೆಡಲು ಗೂಢಚಾರಿಕೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿಯೇ ಹ್ಯಾಕಿಂಗ್ ನಡೆಸಲಾಗಿದೆ ಎಂದು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಆರೋಪಿಸಿದರು.
ದೇವೇಗೌಡರ ಫೋನ್ ಕೂಡ ಟ್ಯಾಪ್ ಆಗಿದೆ. ಹೀಗಾಗಿ ಈ ದೇಶದಲ್ಲಿ ಯಾರು ಸುರಕ್ಷಿತರು ಎಂಬ ಸರಳ ಪ್ರಶ್ನೆ ಮೂಡುತ್ತಿದೆ. ನಮ್ಮಲ್ಲಿ ಯಾವುದೇ ಖಾಸಗಿ ಗೌಪ್ಯತೆ ಉಳಿದಿಲ್ಲ. ಚುನಾಯಿತ ಸರ್ಕಾರಗಳ ನಡುವೆ ಬಿಜೆಪಿ ನಾಯಕರು ಗೂಢಚಾರಿಕೆ ಮಾಡಿರುವುದು ದೇಶದ್ರೋಹ ಕೃತ್ಯ. ಪ್ರಧಾನಿ ಮೋದಿ ಸರ್ಕಾರದಿಂದ ಸಂವಿಧಾನದ ಕಗ್ಗೊಲೆ ಆಗಿದೆ ಎಂದು ಸುರ್ಜೇವಾಲಾ ಕಿಡಿ ಕಾರಿದರು.
ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ರೀತಿಯ ಕೊಳಕು ರಾಜಕೀಯವನ್ನು ನಾವು ಖಂಡಿಸುತ್ತೇವೆ. ಈ ಕೂಡಲೇ ಮೋದಿ ರಾಜೀನಾಮೆ ನೀಡಬೇಕು ಎಂದರು.