ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದರ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗ ನೀಡಿದ ದೂರಿನ ಮೇರೆಗೆ ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ಗೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರಿಸಿರುವ ಪಕ್ಷ ಮಕ್ಕಳನ್ನು ಯಾತ್ರೆಯಲ್ಲಿ ಬಳಸಿಕೊಂಡಿಲ್ಲ ಎಂದು ಹೇಳಿದೆ.
ಹಿರಿಯ ಕಾಂಗ್ರೆಸ್ ನಾಯಕರ ನಿಯೋಗ ಚುನಾವಣಾ ಆಯುಕ್ತರನ್ನು ಸೋಮವಾರ ಭೇಟಿ ಮಾಡಿ ಮಕ್ಕಳ ಹಕ್ಕುಗಳ ಆಯೋಗದ ದೂರನ್ನು ತಿರಸ್ಕರಿಸುವಂತೆ ಕೋರಿದೆ.
ಮಕ್ಕಳನ್ನು ರಾಜಕೀಯ ರ್ಯಾಲಿಗೆ ಬಳಸಿಕೊಂಡಿದ್ದಾರೆ ಎಂದು ನೀಡಲಾದ ದೂರು ಸುಳ್ಳಾಗಿದೆ. ಮಕ್ಕಳ ಜೊತೆಗೆ ರಾಹುಲ್ ಗಾಂಧಿ ಅವರು ಬೆರೆತು ಮಾತುಕತೆ ನಡೆಸಿದ್ದರು. ಅವರನ್ನು ಯಾತ್ರೆಯಲ್ಲಿ ಬಳಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ವಿರುದ್ಧದ ಈ ದೂರು ಕ್ಷುಲ್ಲಕವಾಗಿದೆ. ಎನ್‌ಸಿಪಿಸಿಆರ್ ಚುನಾವಣಾ ಪ್ರಚಾರಕ್ಕಾಗಿ ಈ ನಡೆಯನ್ನು ಅನುಸರಿಸಿದೆ. ಸುಳ್ಳು ಆರೋಪವನ್ನು ಪಕ್ಷದ ಮೇಲೆ ಹೊರಿಸಲಾಗಿದೆ ಎಂದು ಸಮರ್ಥಿಸಿಕೊಳ್ಳಲಾಗಿದೆ.
ಬಿಜೆಪಿ ವಿರುದ್ಧ ಪ್ರತಿದೂರು: ಇನ್ನು, ಚುನಾವಣಾ ಆಯೋಗಕ್ಕೆ ಬಿಜೆಪಿ ವಿರುದ್ಧವೇ ಪ್ರತಿದೂರು ದಾಖಲಾಗಿದೆ. ಮಕ್ಕಳನ್ನು ದುರುದ್ದೇಶಪೂರಿತ ರೀತಿಯಲ್ಲಿ ಬಳಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ಕಾಂಗ್ರೆಸ್ ಪ್ರತಿದೂರು ದಾಖಲಿಸಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ ಅಥವಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂಬುದನ್ನು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನೋಟಿಸ್ ಕೊಟ್ಟಿದ್ದರೆ ಬಗ್ಗೆ ಆಕ್ಷೇಪವಿದೆ. ರಾಜಕೀಯ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂಬ ಎನ್ಸಿಪಿಎಸಿಆರ್ ದೂರೇ ಬಾಲಿಶವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಯಶಸ್ಸು ಮತ್ತು ರಾಹುಲ್ ಗಾಂಧಿ ವಿರುದ್ಧ ಎತ್ತಿಕಟ್ಟಲು ಮಕ್ಕಳನ್ನು ಬಳಸಿಕೊಂಡ ಆರೋಪ ಹೊರಿಸಲಾಗುತ್ತಿದೆ. ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡಲಾಗುತ್ತಿದೆ ಎಂದೂ ದೂರಿದರು.
ಕೇರಳದಲ್ಲಿ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು ಚಿತ್ರಕಲಾ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲು ಮಕ್ಕಳಲ್ಲಿಗೆ ಹೋಗಿದ್ದರು. ಇದನ್ನೇ ಯಾತ್ರೆಗೆ ಬಳಸಿಕೊಳ್ಳಲಾಗಿದೆ ಎಂದು ಬಿಂಬಿಸಲಾಗಿದೆ. ಸಾವಿರಾರು ಮಹಿಳೆಯರು ಮತ್ತು ಮಕ್ಕಳು ರಾಹುಲ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬರುತ್ತಿದ್ದಾರೆ. ಅದರಲ್ಲಿ ಅಕ್ರಮ ಏನೂ ಇಲ್ಲ. ದೂರು ಆಧಾರ ರಹಿತವಾಗಿದ್ದು, ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ತಿಳಿಸಿದೆ.
ಓದಿ: ಎಕ್ಸಾಂ ಹಾಲ್ ಟಿಕೆಟ್ನಲ್ಲಿ ನಟಿ ಐಶ್ವರ್ಯಾ ರೈ ಚಿತ್ರ.. ಪರೀಕ್ಷೆ ಬರೆದರಾ ಮಾಜಿ ವಿಶ್ವಸುಂದರಿ?