ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ವಿಧಿಸಲಾದ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ವೇಳೆ ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ನಾಯಕರು, ಮುಖಂಡರ ದಂಡು ನ್ಯಾಯಾಲಯದ ಮುಂದೆ ಜಮಾಯಿಸಿದ್ದನ್ನು ಬಿಜೆಪಿ ಟೀಕಿಸಿತ್ತು. ಇದು ನ್ಯಾಯಾಂಗದ ಮೇಲೆ ಒತ್ತಡ ಹೇರುವ ತಂತ್ರ ಎಂದು ಆರೋಪಿಸಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ಗೆ ‘ದೇಶಕ್ಕಿಂತ ಒಂದು ಕುಟುಂಬ ದೊಡ್ಡದು’ ಎಂದು ಬಿಜೆಪಿ ಆರೋಪಿಸಿದರೆ, ‘ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ’ ಎಂದು ವಿರೋಧ ಪಕ್ಷ ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ರಾಹುಲ್ ಗಾಂಧಿ ಅವರೊಂದಿಗೆ ಸೂರತ್‌ನ ನ್ಯಾಯಾಲಯಕ್ಕೆ ಕಾಂಗ್ರೆಸ್ ನಾಯಕರು ದಂಡಾಗಿ ಬಂದು ಮೇಲ್ಮನವಿ ಸಲ್ಲಿಸುವುದು ನ್ಯಾಯಾಂಗದ ಮೇಲೆ ಅನಗತ್ಯ ಒತ್ತಡ ಹಾಕುವ ಬಾಲಿಶ ಪ್ರಯತ್ನವಾಗಿದೆ. ನ್ಯಾಯಾಂಗಕ್ಕೆ ಧಕ್ಕೆ ತರುವ ನಡೆಯಾಗಿದೆ. ಇದು ಖಂಡನೀಯ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಟೀಕಿಸಿದ್ದರು.
ಈ ಆರೋಪಕ್ಕೆ ಉತ್ತರಿಸಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್, ನಮ್ಮ ನಾಯಕ ರಾಹುಲ್ಗೆ ಬೆಂಬಲ ನೀಡಲು ಅಲ್ಲಿಗೆ ಹೋಗಿದ್ದೇವೆ. ಇದು ನ್ಯಾಯಾಂಗದ ಮೇಲೆ ಹೇಗೆ ಒತ್ತಡ ತರುತ್ತದೆ? ಬಿಜೆಪಿ ನಾಯಕರು ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಗದ್ದಲವನ್ನು ಸೃಷ್ಟಿಸುತ್ತಿದ್ದಾರೆ. ಇದುವರೆಗೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಂದ ಯಾವುದೇ ಹೇಳಿಕೆ ಬಂದಿಲ್ಲ. ಇದು ಬಾಲಿಶವಲ್ಲವೇ ಎಂದು ಪ್ರಶ್ನಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ''ನ್ಯಾಯಾಲಯದ ತೀರ್ಪಿನ ವಿರುದ್ಧ ನಾವು ಚರ್ಚೆ ಮಾಡುವುದಿಲ್ಲ. ಅನ್ಯಾಯದ ವಿರುದ್ಧ ಹೋರಾಡುತ್ತೇವೆ. ಇದು ಶಕ್ತಿ ಪ್ರದರ್ಶನವಲ್ಲ. ರಾಹುಲ್ ಗಾಂಧಿ ನಮ್ಮ ನಾಯಕರು, ಎಲ್ಲರೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕುಟುಂಬ ಸದಸ್ಯರು ಸಹ ಜೊತೆಯಾಗಿದ್ದಾರೆ. ನಾವು ದೇಶಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಹುಲ್ ಜೊತೆಗಿದ್ದ ಹಿಮಾಚಲಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಬಿಜೆಪಿಯ ಆರೋಪವನ್ನು ತಳ್ಳಿಹಾಕಿ, "ನ್ಯಾಯಾಂಗದ ಮೇಲೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ. ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷ ಮತ್ತು ರಾಹುಲ್ ಗಾಂಧಿ ನಮ್ಮ ಪಕ್ಷದ ದೊಡ್ಡ ನಾಯಕ. ಇದು ರಾಜಕೀಯ ನಾಟಕವಲ್ಲ. ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ" ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಬೆಂಬಲ: ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಪಕ್ಷವು ರಾಹುಲ್ ಗಾಂಧಿಯವರ ಬೆಂಬಲಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯಿಂದ ಯಾವುದೇ ಸಲಹೆ ಅಗತ್ಯವಿಲ್ಲ. ರಾಹುಲ್ ಗಾಂಧಿ ನಮ್ಮ ನಾಯಕರು. ಏನು ಮಾಡಬೇಕೆಂದು ನಮಗೆ ತಿಳಿದಿದೆ. ಕಾಂಗ್ರೆಸ್ ಪಕ್ಷ ಅವರ ಬೆಂಬಲಕ್ಕೆ ನಿಂತಿದೆ. ಇಡೀ ರಾಷ್ಟ್ರ, ಪಕ್ಷದ ಕಾರ್ಯಕರ್ತರು ಅವರೊಂದಿಗೆ ಒಗ್ಗಟ್ಟಿನಿಂದ ಇದ್ದಾರೆ. ನಾವು ಬಂಡೆಯಂತೆ ಅವರೊಂದಿಗೆ ನಿಲ್ಲುತ್ತೇವೆ ಎಂದು ಬೆಂಗಳೂರಿನಲ್ಲಿ ಹೇಳಿದ್ದರು.
ಕೇಂದ್ರ ಸಚಿವ ಠಾಕೂರ್ ಟೀಕೆ: ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ನಾಯಕರ ಉಪಸ್ಥಿತಿಯನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಟೀಕಿಸಿದ್ದಾರೆ. ಹಿಂದುಳಿದವರ ಅವಮಾನವನ್ನು ದೇಶ ಸಹಿಸುವುದಿಲ್ಲ. ಈ ಹಿಂದೆ ಪಿ.ವಿ.ನರಸಿಂಹರಾವ್, ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್ ಕೂಡ ಜೈಲಿಗೆ ಹೋಗಿದ್ದರು. ಅಂದು ಅವರ ಜೊತೆಗೆ ಎಷ್ಟು ಕಾಂಗ್ರೆಸ್ನವರು ಹೋಗಿದ್ದರು. ದೇಶಕ್ಕಿಂತ ಒಂದು ಕುಟುಂಬ ದೊಡ್ಡದಾಯಿತಾ? ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಅದಾನಿ - ಬಿಜೆಪಿ ಸಂಬಂಧ ಕೆದಕಿದ ರಾಹುಲ್ ಗಾಂಧಿ: 'ಕಾಂಗ್ರೆಸ್ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ' ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ರಾಹುಲ್ ಗಾಂದಿ ಬಿಜೆಪಿ ವಿರುದ್ಧ ಹರಿಹಾಯ್ದರು. ಅದಾನಿ ಅವರ ಶೆಲ್ ಕಂಪನಿಗೆ 20 ಸಾವಿರ ಕೋಟಿ ಹಣ ಬಂದಿದ್ದು ಎಲ್ಲಿಂದ. ಆ ಹಣದ ಮೂಲ ಏನು ಎಂದು ಪ್ರಶ್ನಿಸಿದರು.