ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ರಾಜಕೀಯ ಪಕ್ಷಗಳ ನಡುವಿನ ಆರೋಪ - ಪ್ರತ್ಯಾರೋಪಗಳು ಸಾಗಿವೆ. ಇಂದು (ಶನಿವಾರ) ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ಗೆ ಭೇಟಿ ನೀಡಲಿದ್ದು, ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ. ಅದಕ್ಕೂ ಮೊದಲು ಇಲ್ಲಿ ಹಾಕಿರುವ ಹೋರ್ಡಿಂಗ್ಗಳ ಮೇಲಿನ ಚಿತ್ರಗಳು ಮಾತ್ರ ಗಮನ ಸೆಳೆಯುತ್ತಿವೆ.
ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಪಕ್ಷಗಳ ಮೇಲೆ ಕಾಂಗ್ರೆಸ್ ಗುರುತರವಾದ ಆರೋಪ ಮಾಡಿದೆ. ಎರಡೂ ಪಕ್ಷಗಳು ಬಿಜೆಪಿಯ ಬಿ ಟೀಂ ಎಂದು ಹೇಳಿದೆ. ಅಲ್ಲದೇ, ಹೋರ್ಡಿಂಗ್ಗಳಲ್ಲಿ ಪ್ರಧಾನಿ ಮೋದಿ ಅವರು ಸಿಎಂ ಕೆ.ಚಂದ್ರಶೇಖರ್ರಾವ್ ಮತ್ತು ಅಸಾದುದ್ದೀನ್ ಅವರನ್ನು ಆಡಿಸುತ್ತಿರುವ ರೀತಿ ಚಿತ್ರಿಸಿ ಲೇವಡಿ ಮಾಡಿದೆ.
ಮೋದಿ ಕೈಗೊಂಬೆಗಳು: ಬಿಆರ್‌ಎಸ್ ಮತ್ತು ಎಂಐಎಂ ಪಕ್ಷಗಳು ಪ್ರಧಾನಿ ಮೋದಿಯ ಕೈಗೊಂಬೆಗಳು. ಎರಡೂ ಪಕ್ಷಗಳು ತಮ್ಮಲ್ಲಿ ಒಳ ಒಪ್ಪಂದ ಮಾಡಿಕೊಳ್ಳುವುದರ ಜೊತೆಗೆ ಬಿಜೆಪಿ ಜೊತೆಗೂ ಸೇರಿಕೊಂಡಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಲ್ಲಿನ ಹೈಟೆಕ್ ಸಿಟಿ ಸೇರಿದಂತೆ ಹಲವೆಡೆ 'ಗೊಂಬೆಗಳ' ಚಿತ್ರವುಳ್ಳ ಬ್ಯಾನರ್ಗಳನ್ನು ಹಾಕಲಾಗಿದೆ. ಬಿಆರ್‌ಎಸ್ ಮತ್ತು ಎಂಐಎಂ ಬಿಜೆಪಿಯೊಂದಿಗೆ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ.
ತೆಲಂಗಾಣದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿದ ಮಾಡಿದ ಭಾಷಣ ಮತ್ತು ಎಲ್ಲ ರ್ಯಾಲಿಗಳಲ್ಲಿ ಬಿಆರ್‌ಎಸ್ ಮತ್ತು ಎಂಐಎಂ ಬಿಜೆಪಿ ಪಕ್ಷದ ಬಿ ಮತ್ತು ಸಿ ತಂಡಗಳಾಗಿವೆ ಎಂದು ಆರೋಪಿಸಿದ್ದರು. ಇದನ್ನು ಎರಡೂ ಪಕ್ಷಗಳು ಅಲ್ಲಗಳೆದಿವೆ. ಇಂದು ಸಂಜೆ ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಚುನಾವಣೆ ನಿಗದಿಯಾಗಿದೆ. ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಗುರಿ ಹೊಂದಿರುವ ಬಿಆರ್‌ಎಸ್ ಕಾಂಗ್ರೆಸ್‌ನೊಂದಿಗೆ ನೇರ ಹಣಾಹಣಿ ನಡೆಸುತ್ತಿದೆ. ಅಸಾದುದ್ದೀನ್ ಓವೈಸಿಯ ಎಂಐಎಂ ಪಕ್ಷ ಹೈದರಾಬಾದ್‌ನಲ್ಲಿ 9 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಬಿಆರ್ಎಸ್ಗೆ ಬೆಂಬಲ ಘೋಷಿಸಿದೆ.
ವಿದ್ಯುತ್, ನೀರಿನ ಸಮಸ್ಯೆ ಪರಿಹಾರ: ದೇಶದಲ್ಲಿ ನಿರಂತರ ವಿದ್ಯುತ್ ಪೂರೈಸುತ್ತಿರುವ ಏಕೈಕ ರಾಜ್ಯ ತೆಲಂಗಾಣ. ಹೈದರಾಬಾದ್‌ನಲ್ಲಿ ಮಾಲಿನ್ಯ ಮುಕ್ತ ಸಾರ್ವಜನಿಕ ಸಾರಿಗೆ ಒದಗಿಸುವ ಗುರಿ ಹೊಂದಲಾಗಿದೆ. ವಿದ್ಯುತ್, ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಹಿಂದೆ ಪದೇ ಪದೆ ವಿದ್ಯುತ್ ಕಡಿತ, ಕುಡಿಯುವ ನೀರಿಗಾಗಿ ಪ್ರತಿಭಟನೆಗಳು ನಡೆದಿದ್ದವು. ಮಿಷನ್ ಭಗೀರಥ ಮೂಲಕ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲಾಗಿದೆ ಎಂದು ಸಿಎಂ ಕೆಸಿಆರ್ ಪುತ್ರ, ಸಚಿವ ಕೆಟಿ ರಾಮರಾವ್ ಹೇಳಿದರು.
ಇದನ್ನೂ ಓದಿ: ಬಿಜೆಪಿಗೆ 28 ಸ್ಥಾನಗಳನ್ನು ಗೆಲ್ಲಿಸಿಕೊಡುವಲ್ಲಿ ವಿಜಯೇಂದ್ರ ಯಶಸ್ವಿಯಾಗಲಿ: ಕೆಎಸ್ ಈಶ್ವರಪ್ಪ ಹಾರೈಕೆ