ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿರುವ ಕಾಂಗ್ರೆಸ್, ಚರ್ಚೆಗೆ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಇಂದು(ಬುಧವಾರ) ಸಂಸದೀಯ ಸಭೆ ಕರೆದಿದ್ದು, ಎಲ್ಲ ಸಂಸದರು ಭಾಗವಹಿಸಲು ಕೋರಿದೆ. ಸಭೆಯಲ್ಲಿ ಅವಿಶ್ವಾಸ ನಿಲುವಳಿ ಬಗ್ಗೆ ಮುಂದಿನ ತಂತ್ರಗಾರಿಕೆ ರೂಪಿಸಲು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಮೊದಲ ದಿನದ ಚರ್ಚೆಯಲ್ಲಿ ಜನಾಂಗೀಯ ಘರ್ಷಣೆಗೆ ಒಳಗಾಗಿರುವ ಮಣಿಪುರದ ವಿಷಯವಾಗಿ ಆಡಳಿತ ಮತ್ತು ವಿಪಕ್ಷಗಳು ಜಂಗೀಕುಸ್ತಿ ನಡೆಸಿದವು. ಪ್ರಧಾನಿ ಮೋದಿ ಅವರು ಈ ಬಗ್ಗೆ ಮೌನ ವಹಿಸಿದ್ದನ್ನೇ ಟಾರ್ಗೆಟ್ ಮಾಡಿದ ವಿಪಕ್ಷಗಳು ಸಾಲು ಸಾಲು ಪ್ರಶ್ನೆಗಳನ್ನು ಎತ್ತಿವೆ. ಇದಕ್ಕೆ ಹಲವು ಸಚಿವರು ಕೂಡ ಪ್ರತ್ಯುತ್ತರ ನೀಡಿದ್ದಾರೆ.
ಪ್ರಧಾನಿ ಮೋದಿಯೇ ಟಾರ್ಗೆಟ್: ನಿಲುವಳಿ ಮಂಡನೆ ಮೇಲೆ ಚರ್ಚೆ ಆರಂಭಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಮಣಿಪುರದಲ್ಲಿ ಎರಡು ಸಮುದಾಯಗಳ ಮಧ್ಯೆ ಸರ್ಕಾರ ದೊಡ್ಡ ಕಂದಕ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ "ಮೌನ ಪ್ರತಿಜ್ಞೆ" ಮುರಿಯಬೇಕು. ಇದಕ್ಕೆ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಬೇಕು. ಹೀಗಾಗಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ ಎಂದು ಹೇಳಿದರು.
ಮಣಿಪುರದಲ್ಲಿ ಹಿಂಸಾಚಾರಕ್ಕೆ ನೂರಾರು ಪ್ರಾಣಗಳು ಬಲಿಯಾಗಿವೆ. ಆದರೆ, ಪ್ರಧಾನಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಾವು ಆ ರಾಜ್ಯಕ್ಕೆ ನ್ಯಾಯ ಒದಗಿಸಲು ಕೋರುತ್ತೇವೆ. ಇಂಡಿಯಾ ಒಕ್ಕೂಟ ಮಣಿಪುರದ ಬೆಂಬಲಕ್ಕಿದೆ. ಅವಿಶ್ವಾಸ ನಿರ್ಣಯ ತಂದಿದ್ದೇ ಇದೇ ವಿಷಯಕ್ಕಾಗಿ. ಸಂಖ್ಯೆಗಳ ಆಧಾರದಲ್ಲಿ ಸೋಲು- ಗೆಲುವು ಮುಖ್ಯ ಅಲ್ಲ ಎಂದು ಗೊಗೊಯ್ ಹೇಳಿದ್ದರು.
ಸಿಎಂ ವಜಾ ಮಾಡಲು ಆಗ್ರಹ: ಮಣಿಪುರ ರಾಜ್ಯ ಹೊತ್ತಿ ಉರಿಯುತ್ತಿದ್ದರೂ, ಅದನ್ನು ನಿಯಂತ್ರಿಸುವಲ್ಲಿ ವಿಫಲವಾದ ಮುಖ್ಯಮಂತ್ರಿ ಎನ್ ಬಿರೇನ್ ಅವರನ್ನು ಇಲ್ಲಿಯವರೆಗೂ ಏಕೆ ವಜಾ ಮಾಡಿಲ್ಲ. ವಿಪಕ್ಷಗಳ ಇಂಡಿಯಾ ಒಕ್ಕೂಟ ರಾಜ್ಯಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದೆ. ಆದರೆ, ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಅವರು ಈವರೆಗೂ ಅಲ್ಲಿಗೆ ಯಾಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಸಂಜೆ 6 ಗಂಟೆ ಸುಮಾರಿಗೆ ಚರ್ಚೆ ಮುಕ್ತಾಯವಾಯಿತು. ವೈಎಸ್‌ಆರ್‌ಸಿಪಿ, ಶಿವಸೇನೆ, ಜೆಡಿಯು, ಬಿಜೆಡಿ, ಬಿಎಸ್‌ಪಿ, ಬಿಆರ್‌ಎಸ್ ಮತ್ತು ಎಲ್‌ಜೆಪಿಗೆ ಒಟ್ಟು 2 ಗಂಟೆಗಳ ಚರ್ಚೆಗೆ ಕಾಲಾವಕಾಶ ನೀಡಲಾಗಿದೆ. ಸದನದಲ್ಲಿ ಪ್ರತಿ ಪಕ್ಷದ ಸಂಸದರ ಸಂಖ್ಯೆಗೆ ಅನುಗುಣವಾಗಿ ಸಮಯಾವಕಾಶ ನೀಡಲಾಗಿದೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಉತ್ತರ ನೀಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಭಾರತದಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಕುರಿತು ಚರ್ಚೆ: ಅಮೆರಿಕ