ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶ ವಿಧಾನಸಭೆಯಲ್ಲಿನ ನಾಯಕರ ಫೋಟೋ ವಿಚಾರ ಭುಗಿಲೆದ್ದಿದೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ಬಿಜೆಪಿ ತೆಗೆದುಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇತ್ತೀಚೆಗೆ ಮುಗಿದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಸೋಮವಾರದಿಂದ ಹೊಸ ಶಾಸಕರ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಮೊದಲ ಪ್ರಧಾನಿ ನೆಹರು ಅವರ ಭಾವಚಿತ್ರದ ಬದಲಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಸದನದಿಂದ ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದು ನಾಥೂರಾಮ್ ಗೋಡ್ಸೆ ಭಾವಚಿತ್ರವನ್ನು ಬಿಜೆಪಿ ಹಾಕಬಹುದು ಎಂದು ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಕಿಡಿಕಾರಿದ್ದಾರೆ.
''ನೆಹರೂ ಅವರ ಫೋಟೋ ತೆಗೆಯುವುದು ಮುಖ್ಯವಲ್ಲ. ಅವರ (ಬಿಜೆಪಿ) ಪ್ರಯತ್ನ ಎಂದರೆ ನೆಹರು ಅವರ ಆಲೋಚನೆಗಳನ್ನು ತೊಡೆದುಹಾಕುವುದು. ಮುಂದೆ ಬಿಜೆಪಿಯವರು ಅಂಬೇಡ್ಕರ್ ಫೋಟೋ ಬದಲಿಗೆ ಗೋಡ್ಸೆ ಫೋಟೋ ಅಳವಡಿಸುತ್ತಾರೆ'' ಎಂದು ಸಿಂಘಾರ್ ದೂರಿದ್ದಾರೆ. ಮಾಜಿ ಸಿಎಂ ದಿಗ್ವಿಜಯ ಸಿಂಗ್ ಪುತ್ರ ಮತ್ತು ಕಾಂಗ್ರೆಸ್ ಮುಖಂಡ ಜೈವರ್ಧನ್ ಸಿಂಗ್, ''ಸದನದಿಂದ ಜವಾಹರಲಾಲ್ ನೆಹರೂ ಅವರ ಫೋಟೋ ತೆಗೆದು ಹಾಕಿರುವುದು ವಿಷಾದನೀಯ. ಎರಡು ದೇಶಗಳು ಒಟ್ಟಾಗಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದಿವೆ. ಪಾಕಿಸ್ತಾನದ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಜವಾಹರಲಾಲ್ ನೆಹರೂ ಅವರಿಂದಾಗಿ ಭಾರತದ ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಯಾಗಿದೆ. ಬಿಜೆಪಿ ಅಥವಾ ಯಾರೇ ಆಗಲಿ ನೆಹರು ಅವರ ಫೋಟೋ ತೆಗೆದರೂ, ಅದು ತಪ್ಪು. ಈ ಬಗ್ಗೆ ಹಂಗಾಮಿ ಸ್ಪೀಕರ್ ಜೊತೆ ಚರ್ಚಿಸುತ್ತೇನೆ'' ಎಂದು ಹೇಳಿದ್ದಾರೆ.
ಇದರ ನಡುವೆ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹಂಗಾಮಿ ಸ್ಪೀಕರ್ ಗೋಪಾಲ್ ಭಾರ್ಗವ, ''ಇದೆಲ್ಲ ಕಳೆದ ಅಧಿಕಾರಾವಧಿಯಲ್ಲಿ ನಡೆದಿದೆ. ನಾನು ಈ ರೀತಿ ಯಾವುದೇ ಸೂಚನೆ ನೀಡಿಲ್ಲ. ನೆಹರು ಮತ್ತು ಅಂಬೇಡ್ಕರ್ ಇಬ್ಬರೂ ಸರ್ವೋಚ್ಚ ನಾಯಕರು, ಎಲ್ಲರಿಗೂ ಸಮಾನ ಗೌರವವಿದೆ. ವಿಧಾನಸಭೆಯ ಸೆಕ್ರೆಟರಿಯೇಟ್‌ನಲ್ಲಿ ಈ ಕುರಿತು ವಿಶೇಷ ಸಮಿತಿಯಿದ್ದು, ವಿಷಯವನ್ನು ಗಮನಕ್ಕೆ ತರಲಾಗುವುದು. ನಂತರ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದರ ಪ್ರಕಾರ ಕ್ರಮಕೈಗೊಳ್ಳಲಾಗುವುದು'' ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಮಾತನಾಡಿ, ನೆಹರೂ ಮತ್ತು ಅಂಬೇಡ್ಕರ್ ಇಬ್ಬರ ಫೋಟೋಗಳನ್ನು ವಿಧಾನಸಭೆಯಲ್ಲಿ ಪ್ರದರ್ಶಿಸಬೇಕಿತ್ತು. ನೆಹರೂ ಅವರ ಫೋಟೋ ಸದನದಿಂದ ತೆಗೆದಿದ್ದು ತಪ್ಪು. ಬಿಜೆಪಿ ಈಗ ಯೋಚಿಸುತ್ತಿರುವ ರೀತಿಯಲ್ಲಿ ನೋಡಿದರೆ, ಅವರು ಈ ಇಬ್ಬರೂ ಮಹಾನ್ ವ್ಯಕ್ತಿಗಳ ಫೋಟೋಗಳನ್ನು ತೆಗೆದುಹಾಕುತ್ತಾರೆ. ಭವಿಷ್ಯದಲ್ಲಿ ಗೋಡ್ಸೆ ಫೋಟೋವನ್ನು ಹಾಕುತ್ತಾರೆ ಎಂದು ತೋರುತ್ತದೆ ಎಂಂದು ಆರೋಪಿಸಿದ್ದಾರೆ.
ಮತ್ತೊಂದೆಡೆ, ಈ ವಿಚಾರವಾಗಿ ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಕೂಡ ಪ್ರತಿಕ್ರಿಯಿಸಿ, ''ನೆಹರು ಅವರ ಫೋಟೋವನ್ನು ಸೂಕ್ತ ಸ್ಥಳದಲ್ಲಿ ಇರಿಸಲು ಸೆಕ್ರೆಟರಿಯೇಟ್ ನಿರ್ಧರಿಸುತ್ತದೆ. ಅಂಬೇಡ್ಕರ್ ಅವರ ಭಾವಚಿತ್ರ ಹಾಕುವುದನ್ನು ಸ್ವಾಗತಿಸಲೇಬೇಕು. ಇದರ ಬಗ್ಗೆ ಕಾಂಗ್ರೆಸ್ ಈ ರೀತಿ ಮಾತನಾಡಬಾರದು. ವಿಧಾನಸಭೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯಗೊಳಿಸಬೇಕು'' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುವರ್ಣಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ, ನನಗೆ ಬಿಟ್ಟರೆ ಇವತ್ತೇ ತೆರವು ಮಾಡುವೆ: ಪ್ರಿಯಾಂಕ್ ಖರ್ಗೆ