ನವದೆಹಲಿ: ಇಂದು ರಾಹುಲ್ ಗಾಂಧಿ ಇಡಿ ಮುಂದೆ ಹಾಜರಾಗಬೇಕಿದೆ. ಈ ನಡುವೆ ಇಡಿ ಕ್ರಮ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಮತ್ತೊಂದು ಕಡೆ ನವದೆಹಲಿಯಲ್ಲಿರುವ ಇಡಿ ಕಚೇರಿವರೆಗೆ ನಡೆಸಲು ಉದ್ದೇಶಿಸಿದ್ದ ರ‍್ಯಾಲಿಗೆಗೆ ದೆಹಲಿ ಪೊಲೀಸರು ಅನುಮತಿ ನೀಡಿಲ್ಲ. ಈ ಸಂಬಂಧ, ಇಡಿ ಕಚೇರಿಗೆ ತೆರಳಲು ಉದ್ದೇಶಿತ ಮೆರವಣಿಗೆಗಾಗಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯ ಹೊರಗಿನಿಂದ ಮೆರವಣಿಗೆ ಹೊರಡಲು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಎಐಸಿಸಿ ಕಚೇರಿ ಮತ್ತು ರಾಹುಲ್ ಗಾಂಧಿ ನಿವಾಸದ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ಭದ್ರತಾ ಪರಿಸ್ಥಿತಿಯ ಕಾರಣದಿಂದ ನಿಮ್ಮ ಉದ್ದೇಶಿತ ಮೆರವಣಿಗೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ದೆಹಲಿ ಪೊಲೀಸರು ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ತಿಳಿಸಿದ್ದರು.
ದೆಹಲಿಯಲ್ಲಿನ ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಹೊಸದಿಲ್ಲಿ ವ್ಯಾಪ್ತಿಯಲ್ಲಿ ಈ ರ‍್ಯಾಲಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಅಮೃತ ಗುಗುಲೋತ್ ಹೇಳಿದ್ದಾರೆ.
ಈ ನಡುವೆಯೂ ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ಕಚೇರಿ ಮುಂಭಾಗ ಹಾಗೂ ರಾಹುಲ್ ಗಾಂಧಿ ನಿವಾಸದ ಎದುರು ಜಮಾಯಿಸಿದ್ದಾರೆ. ಮೆರವಣಿಗೆಗೆ ಅವಕಾಶ ಇಲ್ಲದಿರುವುದರಿಂದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ:ಇಂದು ಇಡಿ ಮುಂದೆ ರಾಹುಲ್: ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ.. ಕೈ ರ‍್ಯಾಲಿಗೆ ಇಲ್ಲ ಅನುಮತಿ!