ಕೊಚ್ಚಿ (ಕೇರಳ): ಪತ್ನಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ಆಕೆ ತನ್ನ ನಿರೀಕ್ಷೆಯ ಸಂಗಾತಿಯಾಗದ ಕಾರಣದಿಂದ ನಿರಂತರವಾಗಿ ಅವಳನ್ನು ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ ಮತ್ತು ಮಹಿಳೆ ಅಂಥ ನಡವಳಿಕೆಯನ್ನು ಸಹಿಸಿಕೊಳ್ಳಬೇಕಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸುಮಾರು 13 ವರ್ಷಗಳಿಂದ ಪತ್ನಿಯಿಂದ ಬೇರ್ಪಟ್ಟು, ತನ್ನ ಮದುವೆಯನ್ನು ಅನೂರ್ಜಿತಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ಹೈಕೋರ್ಟ್ ಈ ತೀರ್ಪು ನೀಡಿದೆ.
ಕೌಟುಂಬಿಕ ನ್ಯಾಯಾಲಯವು ದಂಪತಿಯ ವಿವಾಹವನ್ನು ವಿವಾಹದ ಮೂಲ ಅಗತ್ಯಗಳನ್ನು ಪೂರೈಸದ ಕಾರಣದಿಂದ ಅನೂರ್ಜಿತಗೊಳಿಸಿತ್ತು. ಆದರೆ, ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಸಿ.ಎಸ್. ಸುಧಾ ಅವರ ಪೀಠವು, 1869ರ ವಿಚ್ಛೇದನ ಕಾಯಿದೆಯಡಿ ಪತಿಯಿಂದ ಪತ್ನಿಗಾದ ಮಾನಸಿಕ ಕ್ರೌರ್ಯದ ಕಾರಣದಿಂದ ವಿವಾಹವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಹೇಳುವ ಮೂಲಕ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಮಾರ್ಪಡಿಸಿತು.
ತನ್ನ ಹೆಂಡತಿಯು ತಾನು ಬಯಸಿದಂತೆ ಇಲ್ಲ ಎಂದು ಅರ್ಜಿದಾರನು ಪತ್ನಿಯ ವಿರುದ್ಧ ನಿರಂತರ ಮತ್ತು ಪುನರಾವರ್ತಿತವಾಗಿ ಅಪಹಾಸ್ಯ ಮಾಡಿದ್ದು ಮತ್ತು ಇತರ ಮಹಿಳೆಯರೊಂದಿಗೆ ಆಕೆಯನ್ನು ಹೋಲಿಸಿದ್ದು ಇತ್ಯಾದಿಗಳು ಖಂಡಿತವಾಗಿಯೂ ಮಾನಸಿಕ ಕ್ರೌರ್ಯವಾಗಿವೆ. ಇದನ್ನು ಹೆಂಡತಿಯಾದವಳು ಸಹಿಸಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಪತ್ನಿ ಮತ್ತು ಆಕೆಯ ತಾಯಿಯ ಮನವಿಗಳು, ಸಾಕ್ಷಿಗಳು ಮತ್ತು ಪತಿಯು ಉದ್ದೇಶಪೂರ್ವಕವಾಗಿ ಪತ್ನಿಯ ವೈಯಕ್ತಿಕ ಇಮೇಲ್ ಐಡಿಯಿಂದ ಆಕೆಯ ಕಚೇರಿ ಇಮೇಲ್ ಐಡಿಗೆ ಜೀವನ ಸಂಗಾತಿಯ ಬಗ್ಗೆ ತನ್ನ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದು ಮತ್ತು ಆಕೆ ಹೇಗೆ ನಡೆದುಕೊಳ್ಳಬೇಕು ಎಂಬ ಸೂಚನೆಗಳನ್ನು ನೀಡಿದ್ದನ್ನು ಆಧರಿಸಿ ಕೋರ್ಟ್ ಈ ತೀರ್ಮಾನಕ್ಕೆ ಬಂದಿದೆ.
ಅರ್ಜಿದಾರನು ತನ್ನ ಹೆಂಡತಿಯಲ್ಲಿ ಆಕರ್ಷಣೆಯನ್ನು ಹೊಂದಿಲ್ಲದಿರುವುದರಿಂದ ಆತ ಆಕೆಯೊಂದಿಗೆ ಯಾವುದೇ ದೈಹಿಕ ಸಂಬಂಧವನ್ನು ಇಟ್ಟುಕೊಂಡಿಲ್ಲವೆಂಬುದು ಆತನು ಮಾಡಿರುವ ಆರೋಪಗಳಿಂದ ಸಾಬೀತಾಗುತ್ತದೆ. ದಂಪತಿಯು ತುಂಬಾ ಕಡಿಮೆ ಅವಧಿಗೆ ಜೊತೆಯಾಗಿ ಇದ್ದಿದ್ದರಿಂದ ಇದನ್ನು ದಿನನಿತ್ಯದ ಜಗಳದ ಭಾಗವೆಂದು ಸಹ ಪರಿಗಣಿಸಲಾಗದು ಮತ್ತು ವಿವಾಹದ ಮೂಲ ಅಗತ್ಯಗಳನ್ನು ಪೂರೈಸಿಲ್ಲ ಎಂದು ಕಂಡು ಬರುತ್ತದೆ ಎಂದು ಕೋರ್ಟ್ ಹೇಳಿದೆ. ಆದಾಗ್ಯೂ ಇದನ್ನು ಸಾಬೀತುಪಡಿಸುವಂಥ ಪುರಾವೆಗಳು ಇಲ್ಲ ಎಂದೂ ಕೋರ್ಟ್ ತಿಳಿಸಿದೆ.