ನವದೆಹಲಿ: ಸಾಮಾನ್ಯವಾಗಿ ದಿನನಿತ್ಯ ಎಲ್ಲರೂ ಬಳಸುವ ಇಂಗ್ಲಿಷ್ ಪದಗಳನ್ನು ಟ್ರೇಡ್ಮಾರ್ಕ್ಗಳಾಗಿ ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಮತ್ತು ಅಂತಹ ಪದಗಳ ಮೇಲೆ ಯಾವುದೇ ವ್ಯಕ್ತಿಯು ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಸಾಮಾನ್ಯ ಇಂಗ್ಲಿಷ್ ಪದಗಳನ್ನು ಒಳಗೊಂಡಿರುವ ಟ್ರೇಡ್ ಮಾರ್ಕ್ ನೋಂದಣಿಗೆ ಅವಕಾಶ ನೀಡುವುದು ಇಡೀ ಭಾಷೆಯನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಇದು ಸ್ವೀಕಾರಾರ್ಹವಲ್ಲ ಎಂದು ನ್ಯಾಯಮೂರ್ತಿ ಸಿ. ಹರಿಶಂಕರ್ ಹೇಳಿದರು.
"ಸಾಮಾನ್ಯವಾಗಿ ಬಳಸುವ ಪದಗಳು ಅಥವಾ ಸಾಮಾನ್ಯವಾಗಿ ಬಳಸುವ ಪದಗಳ ವಿಶಿಷ್ಟವಲ್ಲದ ಸಂಯೋಜನೆಯನ್ನು ಯಾವುದೇ ಒಬ್ಬ ವ್ಯಕ್ತಿಯ ಹೆಸರಲ್ಲಿ ಏಕಸ್ವಾಮ್ಯಗೊಳಿಸಲು ಸಾಧ್ಯವಿಲ್ಲ ಹಾಗೂ ಆ ಪದಗಳನ್ನು ಪ್ರಪಂಚದ ಇನ್ನಾರೂ ಬಳಸದಂತೆ ಮಾಡುವುದು ಸಾಧ್ಯವಿಲ್ಲ." ಎಂದು ನ್ಯಾಯಾಲಯ ಹೇಳಿತು.
"ಹಾಗಾಗಿಯೇ ಟ್ರೇಡ್ ಮಾರ್ಕ್ಸ್ ಕಾಯ್ದೆ, 1999 ರ ಸೆಕ್ಷನ್ 9 (1) (ಎ) ಪ್ರಕಾರ, ಒಬ್ಬ ವ್ಯಕ್ತಿಯ ಸರಕು ಅಥವಾ ಸೇವೆಗಳನ್ನು ಇನ್ನೊಬ್ಬರ ಸರಕುಗಳಿಂದ ಪ್ರತ್ಯೇಕಿಸಲು ಅಸಮರ್ಥವಾಗಿರುವ ವಿಶಿಷ್ಟತೆಯ ಕೊರತೆಯಿರುವ ಟ್ರೇಡ್ ಮಾರ್ಕ್ ನೋಂದಣಿಗೆ ಸಂಪೂರ್ಣ ನಿಷೇಧವಿದೆ. ದಿನನಿತ್ಯದ ಸಾಮಾನ್ಯ ಇಂಗ್ಲಿಷ್ ಬಳಕೆಯ ಪದಗಳು ಈ ವರ್ಗಕ್ಕೆ ಸೇರುತ್ತವೆ" ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಸೆಕ್ಷನ್ 9 (1) (ಎ) ಕಾಯ್ದೆಯು ಸಾಮಾನ್ಯ ಇಂಗ್ಲಿಷ್ ಬಳಕೆಯ ಪದಗಳನ್ನು ಒಳಗೊಂಡಂತೆ ವಿಶಿಷ್ಟತೆಯ ಕೊರತೆಯಿರುವ ಟ್ರೇಡ್ ಮಾರ್ಕ್ ಗಳ ನೋಂದಣಿಯನ್ನು ನಿಷೇಧಿಸುತ್ತದೆ ಎಂದು ಅದು ಹೇಳಿದೆ. "Directors' Institute" ಎಂಬ ಪದಪುಂಜಕ್ಕೆ ಟ್ರೇಡ್ ಮಾರ್ಕ್ ನೀಡಬೇಕೆಂದು ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ Institute of Directors ಹೆಸರಿನ ಸಂಸ್ಥೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯ ಮೇಲಿನ ಆದೇಶ ಮಾಡಿದೆ.
ವಾದಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಲಯವು "ಇನ್ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್" ಎಂಬ ಪದಗಳ ಮೇಲೆ ಮಾಲೀಕತ್ವದ ಹಕ್ಕುಗಳ ಅನುಪಸ್ಥಿತಿಯನ್ನು ಗಮನಿಸಿತು ಮತ್ತು ಪ್ರತ್ಯೇಕತೆಗೆ ಮಾಲೀಕತ್ವದ ಹಕ್ಕುಗಳು ಬೇಕಾಗುತ್ತವೆ ಎಂದು ಹೇಳಿದೆ. "ಮಾಲೀಕತ್ವದ ಹಕ್ಕುಗಳು ಪ್ರತ್ಯೇಕತೆಯ ಹಕ್ಕನ್ನು ಉಳಿಸಿಕೊಳ್ಳಲು ಅನಿವಾರ್ಯವಲ್ಲ. ಒಂದು ಗುರುತಿನ ಮೇಲೆ ಮಾಲೀಕತ್ವದ ಹಕ್ಕುಗಳು ಇಲ್ಲದಿದ್ದರೆ, ಯಾವುದೇ ಪ್ರತ್ಯೇಕತೆ ಇರಲು ಸಾಧ್ಯವಿಲ್ಲ" ಎಂದು ಅದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ದಯಾಮರಣ ಕೋರಿ ನ್ಯಾಯಾಧೀಶೆ ಬಹಿರಂಗ ಪತ್ರ: ಇವತ್ತೇ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್