ಶ್ರೀನಗರ: ಉತ್ತರ ಭಾರತದಾದ್ಯಂತ ಶೀತ ವಾತಾವರಣವಿದೆ. ಕೆಲವೆಡೆ ಚಳಿ ವಿಪರೀತವಾಗಿದೆ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಶೂನ್ಯ ತಾಪಮಾನ ದಾಖಲಾಗಿದೆ. ಲಡಾಖ್ ಸೇರಿದಂತೆ ಹಲವೆಡೆ ಭಾರಿ ಚಳಿ, ಮೋಡ ಕವಿದ ವಾತಾವರಣದ ಜೊತೆಗೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶ್ರೀನಗರದಲ್ಲಿ ಮೈನಸ್ 4.4, ಪಹಲ್ಗಾಮ್‌ನಲ್ಲಿ 7.2 ಮತ್ತು ಗುಲ್ಮಾರ್ಗ್ನಲ್ಲಿ ಮೈನಸ್ 9.2 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಲಡಾಖ್ ಪ್ರದೇಶದ ದ್ರಾಸ್ನಲ್ಲಿ ಮೈನಸ್ 20.8, ಕಾರ್ಗಿಲ್ನಲ್ಲಿ ಮೈನಸ್ 17.2 ಹಾಗೂ ಲೇಹ್‌ನಲ್ಲಿ ಮೈನಸ್ 14 ಡಿಗ್ರಿ ಸಾಮಾನ್ಯ ತಾಪಮಾನವಿದೆ. ಜಮ್ಮುವಿನಲ್ಲಿ 3.6, ಕತ್ರಾದಲ್ಲಿ 5, ಬಟೊಟೆಯಲ್ಲಿ 0.1, ಬನ್ನಿಹಾಲ್ನಲ್ಲಿ ಮೈನಸ್ 1.4 ಹವಾಮಾನ ಇದೆ.
ದೆಹಲಿಯಲ್ಲಿ ದಟ್ಟ ಮಂಜು: ರಾಷ್ಟ್ರ ರಾಜಧಾನಿಯಲ್ಲಿಯೂ ಚಳಿ ತೀವ್ರಗೊಂಡಿದ್ದು 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ದಟ್ಟ ಮಂಜಿನಿಂದ ಗೋಚರತೆ ಪ್ರಮಾಣ ಕಡಿಮೆಯಾಗಿದೆ ಎಂದು ಐಎಂಡಿ ತಿಳಿಸಿದೆ. ಮುಂದಿನ ಹಲವು ದಿನಗಳ ಕಾಲ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗದಲ್ಲಿ ಶೀತ ಗಾಳಿ ಮುಂದುವರೆಯಲಿದೆ. ವಾಯುವ್ಯ ಭಾರತದಲ್ಲಿ ಕೂಡ ದಟ್ಟ ಮಂಜು ಕವಿದ ವಾತಾವರಣ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಹೊರಡಬೇಕಿದ್ದ 21 ರೈಲುಗಳ ಸಂಚಾರ ರದ್ದುಗೊಂಡಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 12 ವಿಮಾನಗಳು ವಿಳಂಬವಾಗಿದೆ.
ಗಾಳಿಯ ಗುಣಮಟ್ಟ ಕುಸಿತ: ಈ ನಡುವೆ ದೆಹಲಿಯಲ್ಲಿ ಗಾಳಿಯ ಮಟ್ಟ ಕುಸಿತ ಕಂಡಿದ್ದು, ಎಕ್ಯೂಐ 348 ದಾಖಲಾಗಿದ್ದು, ಇದು ಕಳಪೆ ಮಟ್ಟದ ವರ್ಗವಾಗಿದೆ. ಮುಂದಿನ ಮೂರು ದಿನಗಳ ಕಾಲ ಗಾಳಿಯ ಮೇಲ್ಮೈ ವೇಗ ಮತ್ತು ತಾಪಮಾನ ಗಾಳಿ ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸಲಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಿದೆ.
ಉತ್ತರ ಪ್ರದೇಶದಲ್ಲಿ ಎಚ್ಚರಿಕೆ: ಉತ್ತರ ಪ್ರದೇಶದ 36 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತೀವ್ರ ಚಳಿ ಹೆಚ್ಚಲಿದ್ದು, ಸರ್ಕಾರ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದೆ. ಶೀತಗಾಳಿಯಿಂದ ಜ. 4ರಿಂದ 7ರವರೆಗೆ ರಾಜ್ಯ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದೆ. 36 ಜಿಲ್ಲೆಗಳಲ್ಲಿ ಮುಂದಿನ 48ಗಂಟೆಗಳಲ್ಲಿ ತಾಪಮಾನ 4.5 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಮಿರ್ಜಾಪುರ, ವಾರಾಣಾಸಿ, ಜಾನ್ಪುರ್, ಗಾಜಿಪುರ್, ಅಜಾಮ್ಗಢ, ಗೋರಖ್ಪುರ್, ಅಯೋಧ್ಯೆ, ಅಮೊರೊಹಾ, ಝಾನ್ಸಿ ಸೇರಿದಂತೆ ಒಟ್ಟು 36 ಜಿಲ್ಲೆಗಳಲ್ಲಿ ಚಳಿ ಹೆಚ್ಚಲಿದೆ. ರಾಜ್ಯ ರಾಜಧಾನಿ ಲಕ್ನೋದಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾನ 17-10 ಇರಲಿದೆ. ನಗರದಲ್ಲಿ ಸಾಧಾರಣ ಮಂಜು ಕವಿದ ವಾತಾವರಣ ಇರಲಿದೆ.
ಮಧ್ಯ ಪ್ರದೇಶದಲ್ಲೂ ಜ. 4ರವರೆಗೆ ಎಚ್ಚರಿಕೆ: ಮಧ್ಯಪ್ರದೇಶದಲ್ಲೂ ಜ. 4ರವರೆಗೆ ಶೀತ ಗಾಳಿಯ ವಾತಾವರಣ ಮುಂದುವರೆಯಲಿದೆ. ರಾಜ್ಯದ ಗುನಾದಲ್ಲಿ ಕಡಿಮೆ ಅಂದರೆ 5.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದ್ದು, ರಾತ್ರಿ ಸಮಯದಲ್ಲಿ ದಟ್ಟ ಮಂಜು ಆವರಿಸಲಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಲ್ಕತ್ತಾದಲ್ಲೂ ಮುಂದುವರೆದ ಚಳಿ: ಶೀತ ಗಾಳಿ ಮತ್ತು ಮಂಜಿನ ವಾತಾವಾರಣದಿಂದ ಕೋಲ್ಕತ್ತಾ ನಿವಾಸಿಗಳು ತತ್ತರಿಸಿದ್ದು, ಗೋಚರತೆ ಪ್ರಮಾಣ ಕುಸಿದಿದೆ. ಭಾರಿ ಚಳಿಯಿಂದ ಜನರು ರಸ್ತೆ ಬದಿ ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇದನ್ನೂ ಓದಿ: ನಿಮಿಷಕ್ಕೆ ಎರಡು ಬಿರಿಯಾನಿ ಡೆಲಿವರಿ ನೀಡಿದ ಸ್ವಿಗ್ಗಿ: 3.50 ಲಕ್ಷಕ್ಕೂ ಹೆಚ್ಚು ಆರ್ಡರ್ ಪಡೆದ ಕಂಪನಿ