ಎರ್ನಾಕುಲಂ (ಕೇರಳ): ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ನ್ನು ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನವಾಗಿದೆ. ತರಬೇತಿ ಹಾರಾಟದ ವೇಳೆ ಈ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಸದ್ಯ ಈ ಅಪಘಾತದ ನಂತರ ರನ್‌ವೇಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ತಾಂತ್ರಿಕ ಸಮಸ್ಯೆ ಕಾರಣದಿಂದ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಪ್ರಾರ್ಥಿಕ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕೋಸ್ಟ್ ಗಾರ್ಡ್ ತರಬೇತಿ ವೇಳೆ ಟೇಕಾಫ್ ಆಗುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ರೇನ್ವೇ ಸ್ಥಳದಿಂದ ಹೊರ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಹಾರ ರಕ್ಷಣೆ ಕೈಗೊಂಡಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ಮೂವರ ಪೈಕಿ ಒಬ್ಬರು ಗಾಯಗೊಂಡಿದ್ದಾರೆ. ಈ ಗಾಯಾಳುವನ್ನು 26 ವರ್ಷದ ಸುನಿಲ್ ಲೊಟ್‌ಲಯೆ ಎಂದು ಗುರುತಿಸಲಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ತರಬೇತಿ ವಿಮಾನ ಪತನ: ಮಹಿಳಾ ಟ್ರೈನಿ ಪೈಲಟ್ ಸೇರಿ ಇಬ್ಬರ ಸಾವು
ಈ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್ ಮಾಹಿತಿ ನೀಡಿದ್ದು, ಸಿಜಿ 855 ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಹೆಚ್) ಧ್ರುವ್ ಮಾರ್ಕ್ III ಪತನಗೊಂಡ ಹೆಲಿಕಾಪ್ಟರ್ ಆಗಿದೆ. ಈ ಹೆಲಿಕಾಪ್ಟರ್‌ನಲ್ಲಿ ಕಂಟ್ರೋಲ್ ರಾಡ್‌ಗಳನ್ನು ಅಳವಡಿಸಲಾಗಿತ್ತು. ನಂತರ ತಪಾಸಣೆಗಾಗಿ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಮಧ್ಯಾಹ್ನ 12:25ರ ಹಾರಾಟ ಮಾಡಿತ್ತು. ನೆಲದಿಂದ 30-40 ಅಡಿ ಎತ್ತರದಲ್ಲಿದ್ದಾಗ ಸಮಸ್ಯೆ ಕಂಡು ಬಂದಿದೆ ಎಂದು ತಿಳಿಸಿದೆ.
ಹೆಲಿಕಾಪ್ಟರ್‌ನಲ್ಲಿ ಲೋಪ ಕಂಡು ತಕ್ಷಣವೇ ಎಚ್ಚೆತ್ತ ಪೈಲಟ್ ಸಾಧ್ಯವಾದಷ್ಟು ನಿಧಾನವಾಗಿ ಲ್ಯಾಂಡಿಂಗ್ ಯತ್ನಿಸಿದ್ದಾರೆ. ಈ ಹೆಲಿಕಾಪ್ಟರ್ ಎಡಕ್ಕೆ ತಿರುಗಿ ಮುಖ್ಯ ರನ್ವೇ ಎಡಭಾಗಕ್ಕೆ ಅಪ್ಪಳಿಸಿದೆ. ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಹೆಲಿಕಾಪ್ಟರ್ನ ರೋಟರ್‌ಗಳು ಮತ್ತು ಏರ್‌ಫ್ರೇಮ್‌ಗೆ ಹಾನಿಯನ್ನುಂಟುಮಾಡಿದೆ. ಈ ಘಟನೆ ಬಗ್ಗೆ ತನಿಖೆ ಮಾಡಲು ಭಾರತೀಯ ಕೋಸ್ಟ್ ಗಾರ್ಡ್ ಆದೇಶಿಸಿದೆ ಎಂದು ಹೇಳಿದೆ.
ಹೆಲಿಕಾಪ್ಟರ್ ಅಪಘಾತದ ಕಾರಣದಿಂದ ಸದ್ಯಕ್ಕೆ ರನ್ವೇ ಮುಚ್ಚಲಾಗಿದೆ. ಇಲ್ಲಿ ಇಳಿಯಬೇಕಾದ ವಿಮಾನಗಳು ತಿರುವನಂತಪುರ, ಕೋಯಂಪತ್ತೂರ್ ವಿಮಾನ ನಿಲ್ದಾಣಗಳತ್ತ ತೆರಳಿದವು. ಘಟನಾ ಸ್ಥಳದಲ್ಲಿ ಹೆಲಿಕಾಪ್ಟರ್ನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ, ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾದ ನಂತರ ಮಾರ್ಚ್ 8ರಿಂದ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್‌ಗಳ ಫ್ಲೀಟ್ಅನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶದಲ್ಲಿ ಪತನಗೊಂಡಿದ್ದ ವಿಮಾನ: ಇದೇ ಮಾರ್ಚ್ 18ರಂದು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಪತನಗೊಂಡಿತ್ತು. ಈ ಘಟನೆಯಲ್ಲಿ ಪೈಲಟ್ ಮತ್ತು ತರಬೇತಿನಿರತ ಮಹಿಳಾ ಪೈಲಟ್ ಸಾವನ್ನಪ್ಪಿದ್ದರು. ಪತನಗೊಂಡ ಈ ವಿಮಾನವು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಹಾರಾಟ ಮಾಡಿತ್ತು. ಆದರೆ, ಇದಾದ ನಂತರ ಸ್ವಲ್ಪ ಹೊತ್ತಿನಲ್ಲಿ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿ ಜಿಲ್ಲೆಯ ಗಡಿಯ ಬಳಿ ಪತನವಾಗಿತ್ತು.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ಗಳ ಸಾವು