ಮುಂಬೈ: ಶಿವಸೇನೆ ನಾಯಕರು ಪಕ್ಷ ಮತ್ತು ಸರ್ಕಾರವನ್ನು ಉಳಿಸಲು ಎಲ್ಲಾ ಹಂತಗಳಲ್ಲೂ ಸರ್ವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಕೂಡ ಸಾಥ್ ಕೊಟ್ಟಿರುವುದು ಗಮನ ಸೆಳೆದಿದೆ.
ಕೆಲವು ಬಂಡಾಯ ಶಾಸಕರ ಪತ್ನಿಯರನ್ನು ಸಂಪರ್ಕಿಸಲು ರಶ್ಮಿ ಪ್ರಯತ್ನಿಸುತ್ತಿದ್ದಾರೆ. ಶಿವಸೇನೆ ಪಕ್ಷ ಇಬ್ಭಾಗವಾದ ಬಳಿಕ ಪಕ್ಷದ ಎಲ್ಲಾ ನಾಯಕರು ಪಕ್ಷ ಹಾಗೂ ಸರ್ಕಾರವನ್ನು ಉಳಿಸುವ ಕಾರ್ಯ ನಡೆಸುತ್ತಿದ್ದಾರೆ.
ವಿಧಾನಸೌಧದಲ್ಲಿ ಕಾನೂನು ಹೋರಾಟ ನಡೆಯುತ್ತಿರುವಾಗಲೇ ಪಕ್ಷದ ಮಟ್ಟದಲ್ಲಿ ರ್ಯಾಲಿ ನಡೆಸುವ ಮೂಲಕ ಕಾರ್ಯಕರ್ತರನ್ನು ಕಟ್ಟಿಕೊಳ್ಳಲು ಭಾವನಾತ್ಮಕ ಕರೆ ನೀಡಲಾಗುತ್ತಿದೆ. ಬಂಡಾಯ ಶಾಸಕರು ವಾಪಸ್ ಬರುವಂತೆ ಎಚ್ಚರಿಕೆ ಮತ್ತು ಮನವಿಗಳನ್ನೂ ಮಾಡಲಾಗುತ್ತಿದೆ. ಬಂಡಾಯ ಶಾಸಕರನ್ನು ಇನ್ನೂ ಪಕ್ಷದಿಂದ ಹೊರಹಾಕಿಲ್ಲ ಅಥವಾ ದೇಶದ್ರೋಹಿ ಎಂದು ಕರೆಯಲಾಗಿಲ್ಲ ಎಂದು ನಾಯಕರು ಹೇಳುತ್ತಿದ್ದು, ಅವರಿಗಾಗಿ ಪಕ್ಷದ ಬಾಗಿಲು ಇನ್ನೂ ತೆರೆದಿದೆ ಎಂದಿದ್ದಾರೆ.
ಈ ಕಾರ್ಯದಲ್ಲಿ ರಶ್ಮಿ ಠಾಕ್ರೆ ಕೂಡ ಪ್ರಮುಖಸ್ಥಾನದಲ್ಲಿ ನಿಂತಿದ್ದಾರೆ. ಬಂಡಾಯ ಶಾಸಕರ ಪತ್ನಿಯರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ, ಶಿಂದೆಯವರ ಕಟ್ಟಾ ಬೆಂಬಲಿಗರಾಗಿರುವ ಶಾಸಕರ ಪತ್ನಿಯರನ್ನು ಸಂಪರ್ಕಿಸಿಲ್ಲ. ಉಳಿದ ಶಾಸಕರ ಪತ್ನಿಯರ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 'ಮಹಾ' ರಾಜಕೀಯ: ಠಾಕ್ರೆಗೆ ಸೋನಿಯಾ ಕರೆ, ಶಿಂದೆ-ಉದ್ಧವ್ ಪರ-ವಿರೋಧ ಪ್ರತಿಭಟನೆ