ಯಾದಾದ್ರಿ (ತೆಲಂಗಾಣ): ಯಾದಾದ್ರಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ 1 ಕೆಜಿ 16 ತೊಲೆ ಚಿನ್ನವನ್ನು ಸಮರ್ಪಿಸಿದ್ದಾರೆ. ಇಂದು ಕುಟುಂಬ ಸಮೇತ ಯಾದಾದ್ರಿಗೆ ಆಗಮಿಸಿದ ಸಿಎಂ ಕೆಸಿಆರ್, ಗೋಪುರದ ಚಿನ್ನದ ಲೇಪನಕ್ಕಾಗಿ ಚಿನ್ನ ಅರ್ಪಿಸಿದರು.
ಯಾದಾದ್ರಿ ದೇವಸ್ಥಾನದ ಗೋಪುರಕ್ಕೆ 65 ಕೆಜಿಯಷ್ಟು ಚಿನ್ನದ ಲೇಪನ ಮಾಡಲಾಗುತ್ತಿದೆ. ಇದಕ್ಕೆ ಕಳೆದ ವರ್ಷ ಸಿಎಂ ಕೆಸಿಆರ್ ಚಿನ್ನವನ್ನು ದೇಣಿಗೆ ನೀಡುವಂತೆ ಕರೆ ನೀಡಿದ್ದರು. ಅಲ್ಲದೇ, ಸ್ವತಃ ತಾವು ಕೂಡ 1 ಕೆಜಿ 16 ತೊಲೆ ಚಿನ್ನವನ್ನು ಸಮರ್ಪಿಸುವುದಾಗಿ ಘೋಷಿಸಿದ್ದರು. ಅದರಂತೆಯೇ ಇಂದು ಆ ಚಿನ್ನವನ್ನು ಶ್ರೀಗಳಿಗೆ ಸಿಎಂ ಕೆಸಿಆರ್ ಅರ್ಪಿಸಿದರು.
ಕುಟುಂಬ ಸಮೇತ ಯಾದಾದ್ರಿಗೆ ಬಂದ ಕೆಸಿಆರ್ ಅವರನ್ನು ದೇವಸ್ಥಾನದ ಅರ್ಚಕರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಕೆಸಿಆರ್ ದಂಪತಿಯೊಂದಿಗೆ ಮೊಮ್ಮಗ ಹಿಮಾಂಶು, ಸಚಿವರಾದ ಜಗದೀಶ್ ರೆಡ್ಡಿ, ಇಂದ್ರಕರನ್ ರೆಡ್ಡಿ, ಪ್ರಶಾಂತ್ ರೆಡ್ಡಿ ಸೇರಿದಂತೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇನ್ನು, ದಸರಾ ಹಬ್ಬದಂದು ರಾಷ್ಟ್ರೀಯ ಪಕ್ಷ ಸ್ಥಾಪನೆಯ ಘೋಷಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಕೆಸಿಆರ್ ಯಾದಗಿರಿಗುಟ್ಟದ ಭೇಟಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ರಾಷ್ಟ್ರೀಯ ಪಕ್ಷ ಸಂಘಟನೆಗಾಗಿ ವಿಮಾನ ಖರೀದಿಗೆ ಸಿಎಂ ಕೆಸಿಆರ್ ನಿರ್ಧಾರ