ಹೈದರಾಬಾದ್: ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ವೇತನ ಪರಿಷ್ಕರಣೆ ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹಲವು ಯೋಜನೆಗಳನ್ನು ಇಂದು ಘೋಷಿಸಿದ್ದಾರೆ.
ವಿಧಾನ ಸಬೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರು ಹಾಗೂ ಶಿಕ್ಷಕರು ತೆಲಂಗಾಣ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸ್ಫೂರ್ತಿದಾಯಕ ಪಾತ್ರ ವಹಿಸಿದ ಶಿಕ್ಷಕರು, ರಾಜ್ಯದ ಅಭಿವೃದ್ಧಿಯಲ್ಲಿ ಅವರು ಬದ್ಧತೆಯಿಂದ ಭಾಗವಹಿಸುತ್ತಿದ್ದಾರೆ. ಅವರ ಸಹಕಾರದಿಂದ, ಅಭಿವೃದ್ಧಿಯ ಫಲಗಳು ಜನರನ್ನು ಯಶಸ್ವಿಯಾಗಿ ತಲುಪುತ್ತಿವೆ. ಸರ್ಕಾರವು ನೌಕರರೊಂದಿಗೆ ಹೊಂದಿರುವ ವಿಶಿಷ್ಟ ಸಂಬಂಧದ ದೃಷ್ಟಿಯಿಂದ, ನೌಕರರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ತೆಲಂಗಾಣ ಸರ್ಕಾರವು ನೌಕರರ ಸ್ನೇಹಪರ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ನೌಕರರ ಹಕ್ಕುಗಳನ್ನು ಸರ್ಕಾರ ಗೌರವಿಸುತ್ತದೆ. ತೆಲಂಗಾಣ ರಾಜ್ಯ ರಚನೆಯ ನಂತರ, ಚಳವಳಿಯಲ್ಲಿ ನೌಕರರು ವಹಿಸಿರುವ ಪಾತ್ರವನ್ನು ಶ್ಲಾಘಿಸುವ ಮೂಲಕ ವಿಶೇಷ ಹೆಚ್ಚಳವನ್ನು ಘೋಷಿಸಿತ್ತು. 2014 ರಲ್ಲಿ 10 ನೇ ವೇತನ ಮಾಪಕಗಳನ್ನು ಪರಿಷ್ಕರಿಸುವ ಮೂಲಕ ಹಾಗೆ 43% ರಷ್ಟು ಹೆಚ್ಚಿನ ವೇತನ ಪರಿಸ್ಕರಣೆ ಘೋಷಿಸುವ ಮೂಲಕ ತನ್ನ ರಾಜ್ಯದ ನೌಕರರ ಮೇಲೆ ಕಾಳಜಿಯನ್ನು ತೋರಿಸಿದೆ ಎಂದು ಹೇಳಿದ್ದಾರೆ.
ಕೊರೊನಾ ದುರಂತವು ರಾಜ್ಯದ ಆರ್ಥಿಕತೆಯನ್ನು ಛಿದ್ರಗೊಳಿಸಿತ್ತು. ಅನಿರೀಕ್ಷಿತ ಹಣಕಾಸಿನ ಕೊರತೆಯಿಂದಾಗಿ 11 ನೇ ವೇತನ ಪರಿಷ್ಕರಣೆ ವಿಳಂಬವಾಯಿತು. ನಾವು 11 ನೇ ವೇತನ ಪ್ರಮಾಣವನ್ನು ಉತ್ತಮ ರೀತಿಯಲ್ಲಿ ಈಗ ಪರಿಷ್ಕರಿಸುತ್ತಿದ್ದೇವೆ. ಅದು ರಾಜ್ಯದ ಎಲ್ಲ ಉದ್ಯೋಗಿಗಳು, ಶಿಕ್ಷಕರನ್ನು ಒಳಗೊಳ್ಳುತ್ತದೆ ಎಂದು ಸಿಎಂ ತಿಳಿಸಿದ್ದಾರೆ.
ಹಿಂದಿನ ಸರ್ಕಾರಗಳು ವೇತನ ಪರಿಷ್ಕರಣೆಯಲ್ಲಿ ಸರ್ಕಾರಿ ನೌಕರರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದವು. ಕೊನೆಯ ವೇತನ ಪರಿಷ್ಕರಣೆಯ ಸಮಯದಲ್ಲಿ ತೆಲಂಗಾಣ ಸರ್ಕಾರವು ಸರ್ಕಾರಿ ನೌಕರರ ವೇತನ ಮಾಪಕಗಳನ್ನು ಪರಿಷ್ಕರಿಸುವಾಗ ತಳ ಮಟ್ಟದಲ್ಲಿ ತಮ್ಮ ಸೇವೆಗಳನ್ನು ಸಲ್ಲಿಸುತ್ತಿರುವ ಇತರೆ ನೌಕರರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಮಾನವೀಯ ದೃಷ್ಟಿಕೋನದಿಂದ ಅವರ ವೇತನವನ್ನೂ ಸಹ ಹೆಚ್ಚಳ ಮಾಡಲಾಗಿದೆ ಎಂದು ಕೆಸಿಆರ್ ವಿವರಿಸಿದ್ದಾರೆ.
ಈ ಬಾರಿ ಸರ್ಕಾರವು ನೌಕರರು, ಶಿಕ್ಷಕರು ಮತ್ತು ಪಿಂಚಣಿದಾರರ ವೇತನ ಮಾಪನಗಳನ್ನು ಪರಿಷ್ಕರಿಸುವ ಜೊತೆಗೆ ಗುತ್ತಿಗೆ ನೌಕರರು, ಹೊರಗುತ್ತಿಗೆ ನೌಕರರು, ಗೃಹರಕ್ಷಕರು, ಅಂಗನವಾಡಿಗಳು, ಆಶಾ ಕಾರ್ಯಕರ್ತೆಯರು, ಎಸ್‌ಇಆರ್‌ಪಿ ನೌಕರರು, ವಿದ್ಯಾ ಸ್ವಯಂ ಸೇವಕರು, ಕೆಜಿಬಿವಿ, ಸರ್ವ ಶಿಕ್ಷಣ ಅಭಿಯಾನ ನೌಕರರ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಸದನಕ್ಕೆ ಸಿಎಂ ತಿಳಿಸಿದರು.
ಘೋಷಣೆಗಳೇನು?
- ಪಿಆರ್‌ಸಿ ಸಮಿತಿಯ ಶಿಫಾರಸುಗಳ ಪ್ರಕಾರ ನೌಕರರ ಆರೋಗ್ಯ ಯೋಜನೆ (ಇಎಚ್‌ಎಸ್) ನ ಹೊಸ ವಿಧಾನಗಳನ್ನು ವಿಕಸನಗೊಳಿಸಲು ನೌಕರರ ಸಂಘಗಳು, ಸರ್ಕಾರಿ ಅಧಿಕಾರಿಗಳನ್ನು ಮಧ್ಯಸ್ಥಗಾರರೊಂದಿಗೆ ಸ್ಟೀರಿಂಗ್ ಸಮಿತಿ ರಚಿಸುತ್ತದೆ
- ನಿವೃತ್ತ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ 15% ಹೆಚ್ಚುವರಿ ಪ್ರಮಾಣದ ಪಿಂಚಣಿಗಾಗಿ ವಯಸ್ಸಿನ ಮಿತಿಯನ್ನು 75 ವರ್ಷದಿಂದ 70 ವರ್ಷಕ್ಕೆ ಇಳಿಸಲು ನಿರ್ಧರಿಸಿದೆ
- ಹಿರಿತನ ಮತ್ತು ನಿರ್ವಹಣೆಯ ಬುದ್ಧಿವಂತಿಕೆಯ ಆಧಾರದ ಮೇಲೆ ಅರ್ಹ ಶಿಕ್ಷಕರಿಗೆ ಬಡ್ತಿ ಮತ್ತು ವರ್ಗಾವಣೆಯನ್ನು ಕೈಗೊಳ್ಳಲಿದೆ
- ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ದಂಪತಿ ನೌಕರರು ಮತ್ತು ಶಿಕ್ಷಕರಿಗೆ, ಒಂದು ಜಿಲ್ಲೆಯಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಸರ್ಕಾರವು ತಕ್ಷಣವೇ ಅಂತರ್ಜಿಲ್ಲಾ ವರ್ಗಾವಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ
- ತೆಲಂಗಾಣದಲ್ಲಿ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶದ ಶಿಕ್ಷಕರಿಗೆ ತಮ್ಮ ರಾಜ್ಯಕ್ಕೆ ಮರಳಲು ಅನುಮತಿ
- ಕೆಜಿಬಿವಿ ಮಹಿಳಾ ಸಿಬ್ಬಂದಿಗೆ ವೇತನದ ಜೊತೆಗೆ 180 ದಿನಗಳ ಹೆರಿಗೆ ರಜೆ
- ಕರ್ತವ್ಯದಲ್ಲಿದ್ದಾಗ ಮೃತಪಟ್ಟ ನೌಕರರ ಕುಟುಂಬ ಸದಸ್ಯರಿಗೆ ಕುಟುಂಬ ಪಿಂಚಣಿ ನೀತಿಯನ್ನು ಸಿಪಿಎಸ್ (ಕೊಡುಗೆ ಪಿಂಚಣಿ ಯೋಜನೆ) ವಿಸ್ತರಿಸಲು ನಿರ್ಧಾರ
- ನೌಕರರು ಮತ್ತು ಶಿಕ್ಷಕರ ನಿವೃತ್ತಿ ಗ್ರಾಚ್ಯುಟಿ 12 ಲಕ್ಷದಿಂದ ರೂ. 16 ಲಕ್ಷ ರೂ.ಗೆ ಏರಿಕೆ
- ರಾಜ್ಯ ಸರ್ಕಾರಿ ನೌಕರರ ಮತ್ತು ಶಿಕ್ಷಕರಿಗೆ ನಿವೃತ್ತಿ ವಯಸ್ಸಿನ ಮಿತಿ 61 ವರ್ಷಕ್ಕೆ ಹೆಚ್ಚಳ
- ಎಲ್ಲಾ ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ 30% ರಷ್ಟು ವೇತನ ಪರಿಸ್ಕರಣೆ ಹಣ ಸಿಗುತ್ತದೆ ಮತ್ತು ಈ ನಿಟ್ಟಿನಲ್ಲಿ 1-4-2021 ರಿಂದ ಆದೇಶಗಳನ್ನು ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತೆಲಂಗಾಣದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.