ಗುವಾಹಟಿ: ನಿನ್ನೆ ಬೆಂಗಳೂರಿನಲ್ಲಿ ನಡೆದ 26 ವಿರೋಧ ಪಕ್ಷಗಳ ಮಹಾಮೈತ್ರಿ ಸಭೆಯಲ್ಲಿ ಈ ಮಹಾಘಟಬಂಧನ್ಗೆ I.N.D.I.A ಎಂದು ಹೆಸರು ಘೋಷಣೆ ಮಾಡುತ್ತಿದ್ದಂತೆ ಅಸ್ಸೋಂ ಮುಖ್ಯಮಂತ್ರಿ ಡಾ ಹಿಮಂತ ಬಿಸ್ವಾ ಶರ್ಮಾ ಅವರು ತಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಒಗ್ಗಟ್ಟಿನ ತಂತ್ರಗಾರಿಕೆ ಆಡಳಿತಾರೂಢ ಬಿಜೆಪಿಗೆ ನಡುಕ ಹುಟ್ಟಿಸಿದಂತಿದೆ. ಈ ಅಲೆ ಅಸ್ಸೋಂನ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರನ್ನೂ ತಟ್ಟಿದಂತಿದೆ. ಮೈತ್ರಿಯ ಹೆಸರು ಇಂಡಿಯಾ ಘೋಷಣೆಯಾದ ನಂತರ, ಮುಖ್ಯಮಂತ್ರಿ ಹಿಮಂತ ವಿಸ್ವಾ ಶರ್ಮಾ ಅವರು ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಗಳ ಬಯೋದಲ್ಲಿ ಇದ್ದ ಪದವನ್ನು ಗಮನಾರ್ಹವಾಗಿ 'ಭಾರತ್' ಎಂದು ಬದಲಾಯಿಸಿಕೊಂಡಿದ್ದಾರೆ.
ಆಶ್ಚರ್ಯವೆಂದರೆ ಅಸ್ಸೋಂ ಮುಖ್ಯಮಂತ್ರಿ ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ತಮ್ಮ ಸ್ವಯಂ ಗುರುತನ್ನು ವಿವರಿಸಲು ದೇಶದ ಹೆಸರು ಭಾರತ್ ಪದವನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಹಿಂದೆ ಇದ್ದ ಇಂಡಿಯಾ ಪದವನ್ನು ತೆಗೆದುಹಾಕಿದ್ದಾರೆ. ಈ ಹಿಂದೆ ಬಯೋದಲ್ಲಿ ಚೀಫ್ ಮಿನಿಸ್ಟರ್ ಆಫ್ ಅಸ್ಸೋಂ, ಇಂಡಿಯಾ ಎಂದು ಬರೆದುಕೊಂಡಿದ್ದರು. ಮಹಾಘಟಬಂಧನ್ಗೆ ವಿಪಕ್ಷಗಳು ಒಮ್ಮತದಿಂದ I.N.D.I.A ಎಂದು ಹೆಸರು ಘೋಷಣೆ ಮಾಡುತ್ತಿದ್ದಂತೆ, ತಮ್ಮ ಬಯೋದಲ್ಲಿದ್ದ ಇಂಡಿಯಾ ಪದವನ್ನು ತೆಗೆದು ಭಾರತ್ ಎಂದು ಬದಲಾಯಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ರಾಜಕೀಯ ವಿಶ್ಲೇಷಕರು ಇದನ್ನು ವಿರೋಧ ಪಕ್ಷದ ಇತ್ತೀಚಿನ ನಡೆಗೆ ಸಾಂಕೇತಿಕ ಪ್ರತಿಕ್ರಿಯೆ ಎಂದು ಹೇಳುತ್ತಿದ್ದಾರೆ.
ಪಾಟ್ನಾದಲ್ಲಿ ನಡೆಸಿದ ಮೊದಲ ವಿಪಕ್ಷಗಳ ಮಹಾಮೈತ್ರಿ ಸಭೆಯ ನಂತರ ದೇಶದ 26 ವಿರೋಧ ಪಕ್ಷಗಳ ನಾಯಕರುಗಳು ಬೇರೆ ಬೇರೆ ರಾಜ್ಯಗಳಿಂದ ನಿನ್ನೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಮಹಾಮೈತ್ರಿ ಸಭೆ ಮಹಾಘಟಬಂಧನ್ ಸಭೆ ನಡೆಸಿದ್ದವು. ಈ ಸಭೆ ದೇಶದ ರಾಜಕೀಯವನ್ನೇ ಅಲ್ಲಾಡಿಸಿತ್ತು. ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ, ಈಗ ಮೈತ್ರಿಯಲ್ಲಿ ಕಾಂಗ್ರೆಸ್ ಮಾತ್ರವಲ್ಲದೇ ಹಲವು ಪಕ್ಷಗಳು ಇರುವುದರಿಂದ, ಮೈತ್ರಿ ಇತರ ಪಕ್ಷಗಳು ಈ ಹಿಂದೆ ಇದ್ದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೆಸರನ್ನು ಬದಲಾಯಿಸುವುವಂತೆ ಒತ್ತಾಯಿಸಿದ್ದವು.
ಆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನಾಲ್ಕು ಹೆಸರುಗಳನ್ನು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧೀ ಅವರಿಗೆ ಡ್ರಾಫ್ಟ್ ಮಾಡಿದ್ದರು. ನಿನ್ನೆ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಆ ಹೆಸರುಗಳನ್ನು ಮೈತ್ರಿ ಪಕ್ಷಗಳ ಮುಂದೆ ಪ್ರಸ್ತಾಪ ಪಡಿಸಿದ್ದರು. ಎಲ್ಲಾ ಪಕ್ಷಗಳು ಚರ್ಚೆಯ ಬಳಿಕ ನಾಲ್ಕು ಹೆಸರುಗಳಲ್ಲಿ ಇಂಡಿಯಾ ಹೆಸರಿಗೆ ಒಮ್ಮತ ಸೂಚಿಸಿದ್ದವು. ಹಾಗಾಗಿ ಮಹಾಘಟಬಂಧನ್ ಗೆ I.N.D.I.A ಹೆಸರನ್ನು ಅಂತಿಮಗೊಳಿಸಲಾಗಿತ್ತು.
ವಿಪಕ್ಷಗಳ ಸಾಮಾನ್ಯ ಸಮಾವೇಶದ ವೇಳೆ ಈ ಹೊಸ ಹೆಸರನ್ನು ಬಳಸಿರುವ ವಿಚಾರಕ್ಕೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ದೇಶದ ಹೆಸರನ್ನು ಬಳಸಿಕೊಂಡು ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಹೇಳಿದೆ. ಬಿಜೆಪಿ ನೇತೃತ್ವದ ಅಸ್ಸೋಂ ಸರ್ಕಾರದ ಮುಖ್ಯಮಂತ್ರಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಟ್ವಿಟರ್ ಮತ್ತು ಫೇಸ್‌ಬುಕ್ ಪ್ರೊಫೈಲ್‌ಗಳಿಂದ ರಾತ್ರೋರಾತ್ರಿ ಇಂಡಿಯಾ ಪದವನ್ನು ಬಿಟ್ಟು ಭಾರತ್ ಪದವನ್ನು ಬಳಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ಸ್ವಾಭಾವಿಕವಾಗಿ ದಿನದ ಚರ್ಚೆಯಾಗಿದೆ.
ಇದನ್ನೂ ಓದಿ: Opposition parties meeting: ವಿಪಕ್ಷಗಳ ಸಭೆಯಲ್ಲಿ ಮಹಾಮೈತ್ರಿ ನಾಮಕರಣಕ್ಕೆ ನಾಲ್ಕು ಹೆಸರುಗಳ ಪ್ರಸ್ತಾವನೆ