ನವದೆಹಲಿ: ಗ್ರಾಮೀಣ ಭಾಗಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ನೆಟ್‌ವರ್ಕ್ ಮತ್ತು ಅಮರ್ಪಕ ಅಂತರ್ಜಾಲ ಸಂಪರ್ಕ ಸಮಸ್ಯೆ ನಿವಾರಿಸುವಂತೆ ಕೋರಿ ಭಾರತದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಜೂನ್ 8 ರಂದು ಕೇಂದ್ರ ಕಾನೂನು ಸಚಿವರಿಗೆ ಬರೆದ ಪತ್ರದಲ್ಲಿ ಸಿಜೆಐ , "ಅಗತ್ಯವಿರುವ ಎಲ್ಲ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗಿನ ನನ್ನ ಇತ್ತೀಚಿನ ಸಂವಾದದ ಸಂದರ್ಭದಲ್ಲಿ ಹೊರಹೊಮ್ಮಿದ ಕೆಲವು ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರಲು ನಾನು ಈ ಪತ್ರ ಬರೆಯುತ್ತಿದ್ದೇನೆ'' ಎಂದು ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆ ಗ್ರಾಮೀಣ ಭಾಗಗಳಲ್ಲಿನ ನೆಟ್‌ವರ್ಕ್ ಸಮಸ್ಯೆ ನ್ಯಾಯ ವಿತರಣೆ ವೇಗದ ಮೇಲೂ ಸಹ ಪರಿಣಾಮ ಬೀರುತ್ತಿದೆ. ಸಮರ್ಪಕ ತಂತ್ರಜ್ಞಾನದ ಕೊರತೆ ಹಿನ್ನೆಲೆ ಇಂದಿನ ಪೀಳಿಗೆಯ ವಕೀಲರನ್ನು ಹೊರಗಿಡಲಾಗುತ್ತಿದೆ.
ಹೀಗಾಗಿ ದೇಶದ ಸಾವಿರಾರು ಯುವ ವಕೀಲರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ಮುಖ್ಯ ನ್ಯಾಯಾಮೂರ್ತಿಗಳು ಬರೆದಿದ್ದಾರೆ. ಈ ಸಮಸ್ಯೆಗಳನ್ನು ಸಂಬಂಧಪಟ್ಟ ಸಚಿವಾಲಯಗಳು/ಇಲಾಖೆಗಳೊಂದಿಗೆ ಚರ್ಚಿಸಿ ಅವುಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಜೆಐ ಕಾನೂನು ಸಚಿವರಿಗೆ ಮನವಿ ಮಾಡಿದ್ದಾರೆ.
"ಸಾಂಕ್ರಾಮಿಕ ನಂತರದ ಸಮಯದಲ್ಲಿ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಸುಲಭಗೊಳಿಸಲು ನ್ಯಾಯಾಂಗ ಮೂಲ ಸೌಕರ್ಯವನ್ನು ಇತ್ತೀಚಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಾಧನಗಳೊಂದಿಗೆ ಹೆಚ್ಚಿಸಬೇಕಾಗಿದೆ ಎಂದು ಎಂದು ಸಿಜೆಐ ಪತ್ರದಲ್ಲಿ ತಿಳಿಸಿದ್ದಾರೆ.
ಇದಲ್ಲದೇ, ಸಾಂಕ್ರಾಮಿಕ ಸಮಯದ ಸವಾಲುಗಳನ್ನು ಎದುರಿಸಲು ನ್ಯಾಯಾಂಗ ಮೂಲಸೌಕರ್ಯ ಸುವ್ಯವಸ್ಥಿತಗೊಳಿಸಬೇಕು ಮತ್ತು ಪರಿಷ್ಕರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕಾನೂನು ವೃತ್ತಿಪರರು ಮತ್ತು ನ್ಯಾಯಾಂಗ ಕ್ಷೇತ್ರಕ್ಕೆ ಸೇರಿದವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಆದ್ಯತೆ ಮೇರೆಗೆ ವ್ಯಾಕ್ಸಿನೇಷನ್ ನೀಡುವಂತೆ ಸಿಜೆಐ ಎನ್ ವಿ ರಮಣ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಎಲ್ಲ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗಿನ ನನ್ನ ಸಂವಾದದ ಸಮಯದಲ್ಲಿ, ಆಯಾ ಹೈಕೋರ್ಟ್‌ಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕೊಲಾಜಿಯಂ ಮೂಲಕ ಶಿಫಾರಸುಗಳನ್ನು ಕಳುಹಿಸುವ ಪ್ರಕ್ರಿಯೆ ಚುರುಕುಗೊಳಿಸುವ ಅಗತ್ಯತೆ ಬಗ್ಗೆಯೂ ವಿವರಿಸಿದ್ದಾರೆ.