ನವದೆಹಲಿ : ಬಾಲಿವುಡ್ ನಟ ಶಾರುಖ್ ಖಾನ್ ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದದ ಮಧ್ಯಸ್ಥಿಕೆ ಪ್ರಕ್ರಿಯೆಯ ಭಾಗವಾಗಬೇಕೆಂದು ಮುಖ್ಯ ನ್ಯಾಯಮೂರ್ತಿ ಬಯಸಿದ್ದರು ಎಂದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ಎಸ್.ಎ. ಬೋಬ್ಡೆ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಸುಪ್ರೀಂಕೋರ್ಟ್ನ ಹಿರಿಯ ವಕೀಲ ವಿಕಾಸ್ ಸಿಂಗ್ ಹೇಳಿದ್ದಾರೆ.
ನ್ಯಾಯಮೂರ್ತಿ ಬೋಬ್ಡೆ ಅವರು ಅಯೋಧ್ಯೆಯ ವಿವಾದದ ವಿಚಾರಣೆ ನಡೆಸಿದ್ದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಭಾಗವಾಗಿದ್ದರು. ಈ ಪೀಠ ಅಯೋಧ್ಯೆ ವಿವಾದವನ್ನು ಆಲಿಸಿ 2019 ರಲ್ಲಿ ತನ್ನ ತೀರ್ಪನ್ನು ಪ್ರಕಟಿಸಿತ್ತು. ಪ್ರಕರಣದ ಆರಂಭಿಕ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಬೋಡ್ಡೆ ಅವರು, ಶಾರುಖ್ ಖಾನ್ ಮಧ್ಯಸ್ಥಿಕೆ ಸಮಿತಿಯ ಭಾಗವಾಗಬೇಕೆಂದು ಬಯಸಿದ್ದರು ಎಂದು ವಕೀಲ ಸಿಂಗ್ ತಿಳಿಸಿದ್ದಾರೆ.
ಓದಿ : ಕೊರೊನಾದಿಂದಾಗಿ ನಂಬಿಕೆ ಕಳೆದುಕೊಳ್ಳಬೇಡಿ; ನಿರ್ಗಮಿತ ಸಿಜೆಐ ಬೊಬ್ಡೆ
ಶಾರುಖ್ ಖಾನ್ ಕೂಡ ಮಧ್ಯಸ್ಥಿಕೆ ಸಮಿತಿಯಲ್ಲಿ ಸೇರಲು ಒಲವು ಹೊಂದಿದ್ದರು. ಆದರೆ ನಂತರ ಮಧ್ಯಸ್ಥಿಕೆ ಸಮಿತಿಯನ್ನು ರದ್ದುಪಡಿಸಲಾಯಿತು ಮತ್ತು ನ್ಯಾಯಾಲಯ ಈ ವಿಷಯವನ್ನು ವಿಚಾರಣೆಗೆ ತೆಗೆದುಕೊಂಡಿತು. ಅಯೋಧ್ಯೆ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಬೇಕು ನ್ಯಾಯಮೂರ್ತಿ ಬೋಬ್ಡೆ ಬಲವಾದ ಅಭಿಪ್ರಾಯ ಹೊಂದಿದ್ದರು ಎಂದು ಸಿಂಗ್ ಹೇಳಿದ್ದಾರೆ.