ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಂನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸೈನಿಕನೊಬ್ಬ ತನ್ನ ಎಕೆ-47 ರೈಫಲ್‌ನಿಂದ ಮನಬಂದಂತೆ 20 ರಿಂದ 30 ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಸಹೋದ್ಯೋಗಿ ಯೋಧನ ಕೊಲೆಯಾಗಿದ್ದು, ಇತರ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಸಂಜೆ ಆರು ಗಂಟೆ ಸುಮಾರಿಗೆ ಯೋಧ ಏಕಾಏಕಿ ಮನಸೋಇಚ್ಛೆ ಗುಂಡಿನ ಮಳೆ ಸುರಿಸಿದ್ದು, ರಂಜಿತ್ ಸರೇಂಗಿ ಎಂಬುವವರು ಗುಂಡು ತಾಗಿ ಸಾವನ್ನಪ್ಪಿದ್ದಾರೆ. ಸುಬೀರ್ ಘೋಷ್ ಎಂಬ ಮತ್ತೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಬೀರ್ ಘೋಷ್ ಸೇರಿ ಇತರ ಗಾಯಾಳುಗಳನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕೋಲ್ಕತ್ತಾ ಪೊಲೀಸ್‌ನ ಕಮಾಂಡೋಗಳು ಮತ್ತು ಸಿಐಎಸ್‌ಎಫ್ ಅಧಿಕಾರಿಗಳು ಮ್ಯೂಸಿಯಂಗೆ ದೌಡಾಯಿಸಿದ್ದಾರೆ. ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದಿದ್ದಾರೆ. ಹಂತಕ ಯೋಧನಿಗೆ ಶರಣಾಗುವಂತೆ ಸೂಚಿಸಲಾಗಿದೆ. ಅಲ್ಲದೇ, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಕೋಲ್ಕತ್ತಾದ ನಗರ ಪೊಲೀಸ್ ಕಮಿಷನರ್ ವಿನೀತ್ ಗೋಯೆಲ್ ಕೂಡ ಸ್ಥಳಕ್ಕೆ ದಾವಿಸಿದ್ದಾರೆ.
ಇದನ್ನೂ ಓದಿ: ಗೆಳೆಯನ ಭೇಟಿಗೆ ಹೋದ ವಿವಾಹಿತ ಮಹಿಳೆ: ಕಾಂಪೌಂಡ್ಗೆ ಕಟ್ಟಿ ತಾಲಿಬಾನ್ ರೀತಿ ಶಿಕ್ಷೆ ನೀಡಿದ ಗ್ರಾಮಸ್ಥರು