ಶ್ರೀನಗರ: ಮನರಂಜನೆಯಿಂದ ದೂರವೇ ಉಳಿದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಮನ್ವಂತರ ಶುರುವಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದಲ್ಲಿ ಆಧುನಿಕ ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟಿಸಲಿದ್ದಾರೆ. ಈ ಮೂಲಕ ಸುಮಾರು 30 ವರ್ಷಗಳ ನಂತರ ಕಣಿವೆ ನಾಡಿನಲ್ಲಿ ಸಿನಿಮಾ ಮಂದಿರಗಳು ತೆರೆದುಕೊಳ್ಳುತ್ತಿವೆ.
INOX ವಿನ್ಯಾಸಗೊಳಿಸಿರುವ ಮತ್ತು ಡಿ.ಪಿ.ಧರ್ ಒಡೆತನದ ಮಲ್ಟಿಪ್ಲೆಕ್ಸ್ ಚಿತ್ರಮಂದಿರವು ಬಾದಾಮಿ ಬಾಗ್ ಸೇನಾ ಕಂಟೋನ್ಮೆಂಟ್ ಎದುರು ಶ್ರೀನಗರದ ಸೋನ್ವಾರ್‌ನಲ್ಲಿದೆ. ಇದನ್ನು ಲೆ.ಗವರ್ನರ್ ಮನೋಜ್ ಸಿನ್ಹಾ ಅವರು ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಪ್ರದರ್ಶನದೊಂದಿಗೆ ಉದ್ಘಾಟಿಸುವರು.
ಫಾರೂಕ್ ಅಬ್ದುಲ್ಲಾ ಸರ್ಕಾರದ ಅವಧಿಯಲ್ಲಿ 1998 ರಲ್ಲಿ ಬ್ರಾಡ್‌ವೇ, ನೀಲಂ ಮತ್ತು ರೀಗಲ್ ಎಂಬ ಮೂರು ಚಿತ್ರಮಂದಿರಗಳನ್ನು ಪುನಃ ತೆರೆಯಲಾಗಿತ್ತು. ಆದರೆ ರೀಗಲ್ ಸಿನಿಮಾ ಪ್ರದರ್ಶನ ವೇಳೆ ಗ್ರೆನೇಡ್ ಸ್ಫೋಟಗೊಂಡಿದ್ದು ತಕ್ಷಣವೇ ಅದನ್ನು ಮುಚ್ಚಲಾಗಿತ್ತು. ಅಂದಿನಿಂದ ಕಾಶ್ಮೀರದಲ್ಲಿ ಯಾವುದೇ ಚಿತ್ರಮಂದಿರಗಳು ತೆರೆದಿರಲಿಲ್ಲ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ನೂತನ ಚಿತ್ರಮಂದಿರಗಳನ್ನು ಉದ್ಘಾಟಿಸಿದ ಎಲ್‌ಜಿ ಮನೋಜ್ ಸಿನ್ಹಾ
ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ, ಕಣಿವೆ ರಾಜ್ಯದಲ್ಲಿ ಸಿನಿಮಾಗಳ ಪ್ರದರ್ಶನ ಆರಂಭವಾಗಿದೆ. ಕಳೆದ ವಾರ ಎಲ್‌ಜಿ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಎರಡು ಚಿತ್ರಮಂದಿರಗಳನ್ನು ಉದ್ಘಾಟಿಸಲಾಗಿದೆ. ಶ್ರೀನಗರದ INOX ಚಿತ್ರಮಂದಿರವು ಅಕ್ಟೋಬರ್ 1 ರಿಂದ ಸಾಮಾನ್ಯ ಪ್ರದರ್ಶನಗಳನ್ನು ಪ್ರಾರಂಭಿಸುತ್ತದೆ ಮತ್ತು ಸೆಪ್ಟೆಂಬರ್ 26 ರ ನಂತರ ಟಿಕೆಟ್ ಸೇವೆಗಳು ಪ್ರಾರಂಭವಾಗಲಿವೆ.