ಬೇಲೂರು(ಪಶ್ಚಿಮ ಬಂಗಾಳ): ಭಾರತ ಸರ್ವಧರ್ಮ ಸಮನ್ವಯತೆಯಿಂದ ಕೂಡಿದ ಅತ್ಯಪರೂಪದ ದೇಶ. ಇಲ್ಲಿ ಎಲ್ಲಾ ಧರ್ಮದ ಜನರೂ ಶತಮಾನಗಳಿಂದ ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಈಗಲೂ ಸಹ ಒಂದು ಧರ್ಮದ ಹಬ್ಬವನ್ನೂ ಎಲ್ಲಾ ಧರ್ಮೀಯರೂ ಆಚರಿಸುವ ಪರಂಪರೆ ಅಲ್ಲಲ್ಲಿ ಮುಂದುವರೆದಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಪಶ್ಚಿಮ ಬಂಗಾಳದ ಬೇಲೂರು ಮಠ.
ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಇರುವ ರಾಮಕೃಷ್ಣ ಮಠಗಳ ಮತ್ತು ರಾಮಕೃಷ್ಣ ಮಿಷನ್ ಸಂಸ್ಥೆಗಳ ಮುಖ್ಯ ಕಚೇರಿ ಎಂದು ಕರೆಸಿಕೊಳ್ಳುವ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿರುವ ಬೇಲೂರು ಮಠದಲ್ಲಿ ಕ್ರಿಸ್ಮಸ್ ಆಚರಿಸಲಾಗಿದೆ.
ಕೇವಲ ಬೇಲೂರು ಮಠದಲ್ಲಿ ಮಾತ್ರವಲ್ಲದೇ ಎಲ್ಲಾ ರಾಮಕೃಷ್ಣ ಮಠಗಳಲ್ಲೂ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತಿದೆ. ಸದ್ಯಕ್ಕೆ ಬೇಲೂರು ಮಠದಲ್ಲಿ ಯೇಸು ಕ್ರಿಸ್ತನ ಆರಾಧನೆ ಮಾತ್ರವಲ್ಲದೇ ಬೈಬಲ್ ಅನ್ನು ಪಠಣ ಮಾಡುವುದರೊಂದಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ.
ಯೇಸುವಿನ ಭಾವಚಿತ್ರದ ಮುಂದೆ ಕೇಕ್, ಹಣ್ಣುಗಳು ಮತ್ತು ಕಾಫಿಯನ್ನು ಇರಿಸಿ ಪ್ರಾರ್ಥನೆ ಸಲ್ಲಿಸಲಾಗಿದ್ದು, ಈ ಪ್ರಾರ್ಥನೆಯಲ್ಲಿ ಮಠದ ಮುಖ್ಯಸ್ಥರು ಮತ್ತು ಮುಖಂಡರು ಹಾಗೂ ಕೆಲವು ಕ್ರೈಸ್ತ ಸಮುದಾಯದವರೂ ಪಾಲ್ಗೊಂಡು ಭಾವೈಕ್ಯತೆ ಮೆರೆದಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಸಂಭ್ರಮದ ಕ್ರಿಸ್ಮಸ್ : ರಾಷ್ಟ್ರಪತಿ ಮತ್ತು ಪ್ರಧಾನಿಯಿಂದ ಶುಭಾಶಯ