ಚಿತ್ರಕೂಟ(ಉತ್ತರಪ್ರದೇಶ): ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯಲ್ಲಿ ಭಾರಿ ದುರಂತವೊಂದು ಸಂಭವಿಸಿದೆ. ಮನೆಯ ಹೊರಗಡೆ ಮಲಗಿದ್ದ ಸುಮಾರು 7 ಜನರ ಮೇಲೆ ಟೊಮೆಟೊ ತುಂಬಿದ್ದ ಪಿಕ್ಅಪ್ ವಾಹನವೊಂದು ಹರಿದಿದೆ. ಈ ವೇಳೆ ಸ್ಥಳದಲ್ಲೇ ಆರು ಜನ ಸಾವನ್ನಪ್ಪಿದ್ದು, ವ್ಯಕ್ತಿಯೊಬ್ಬರು ಬದುಕುಳಿದಿದ್ದಾರೆ. ಝಾನ್ಸಿ-ಮಿರ್ಜಾಪುರ ರಾಷ್ಟ್ರೀಯ ಹೆದ್ದಾರಿಯ ಭಾರತ್‌ಕುಪ್ ಗ್ರಾಮದಲ್ಲಿ ಈ ದುರಂತ ನಡೆದಿದೆ.
ಇಲ್ಲಿ ಕೆಲ ಗ್ರಾಮಸ್ಥರ ಮನೆಗಳು ಹೆದ್ದಾರಿ ಬದಿಯಲ್ಲೇ ಇವೆ. ಹೀಗಾಗಿ ಗ್ರಾಮಸ್ಥರು ತಮ್ಮ ಮನೆಯ ಮುಂದಿನ ಜಾಗದಲ್ಲಿ ಮಲಗುವ ರೂಢಿಯಿದ್ದು, ಎಂದಿನಂತೆ ನಿನ್ನೆ ರಾತ್ರಿ ಸಹ ಕೆಲ ಗ್ರಾಮಸ್ಥರು ಮನೆಯ ಹೊರಗಿನ ಆವರಣದಲ್ಲಿ ಮಲಗಿದ್ದರು. ಇಂದು ನಸುಕಿನ ಜಾವ ನಿಯಂತ್ರಣ ತಪ್ಪಿ ಟೊಮೆಟೊ ತುಂಬಿದ್ದ ಪಿಕ್ಅಪ್ ವಾಹನ ಮನೆ ಮುಂದೆ ಮಲಗಿದ್ದ ಸುಮಾರು ಏಳು ಜನರ ಮೇಲೆ ಹರಿದಿದೆ.
ಓದಿ: ತಾಯಿ ಬಳಿ ತೆರಳುತ್ತಿದ್ದ ಬಾಲಕಿಗೆ ಕಾರು ಡಿಕ್ಕಿಯಾಗಿ ಸಾವು.. ಅಪಘಾತದ ಬಳಿಕವೂ ಮದ್ಯ ಸೇವಿಸಿ ದುಷ್ಟರು ಪರಾರಿ
ಈ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ಐವತ್ತು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.