ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಲೋಕಜನ ಶಕ್ತಿ ಪಕ್ಷ(ಎಲ್ಜೆಪಿ) ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದರೆ ಜೆಡಿಯು ಪಕ್ಷಕ್ಕೆ ಟಾಂಗ್ ನೀಡುವಲ್ಲಿ ಚಿರಾಗ್ ಪಾಸ್ವಾನ್ ಕೊನೆಗೂ ಯಶಸ್ವಿಯಾಗಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಯಿಂದ ಹೊರಬಂದು ಕಣಕ್ಕಿಳಿದಿದ್ದ ಎಲ್ಜೆಪಿ ಜೆಡಿಯು ಪಕ್ಷವನ್ನ ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದೆ. 243 ಕ್ಷೇತ್ರಗಳ ಪೈಕಿ ಜೆಡಿಯು 43, ಬಿಜೆಪಿ 74, ಆರ್ಜೆಡಿ 75 ಸ್ಥಾನಗಳಲ್ಲಿ ಗೆಲುವು ಸಾಧನೆ ಮಾಡಿದ್ದು, ಇತರರು 50 ಸ್ಥಾನ ಗೆದ್ದುಕೊಂಡಿದೆ. ಆದರೆ ಎಲ್ಜೆಪಿ ಮಾತ್ರ 1 ಸ್ಥಾನದಲ್ಲಿ ಜಯ ಸಾಧಿಸಿದೆ.
ಜೆಡಿಯುಗೆ ಟಾಂಗ್ ನೀಡಿದ ಎಲ್ಜೆಪಿ
ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದ ಎಲ್ಜೆಪಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಕಣಕ್ಕಿಳಿದಿದ್ದ ಎಲ್ಲ 115 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. ಈ ಮೂಲಕ ವೋಟ್ ವಿಭಜನೆಗೊಂಡಿದ್ದರಿಂದ ಜೆಡಿಯು ಸೋಲು ಕಾಣುವಂತಾಗಿದೆ.
ಈ ಹಿಂದಿನಿಂದಲೂ ನಿತೀಶ್ ಕುಮಾರ್ ಮೇಲೆ ಹರಿಹಾಯ್ತಿದ್ದ ಚಿರಾಗ್ ಪಾಸ್ವಾನ್, ರಾಜಕೀಯ ಲೆಕ್ಕಾಚಾರ ಬಳಸಿಕೊಂಡು ಜೆಡಿಯು ಪಕ್ಷಕ್ಕೆ ಸರಿಯಾಗಿ ಹೊಡೆತ ನೀಡಿ, ತಮ್ಮ ಸೇಡು ಕೊನೆಗೂ ತೀರಿಸಿಕೊಂಡಿದ್ದಾರೆ. ಈ ಸಲದ ಚುನಾವಣೆಗೆ ಸೀಟು ಹಂಚಿಕೆ ವೇಳೆ ಕೂಡ ಎನ್ಡಿಎ ಮೈತ್ರಿಕೂಟದಿಂದ ಎಲ್ಜೆಪಿ ಹೊರಗೆ ಇಡುವಲ್ಲಿ ನಿತೀಶ್ ಕುಮಾರ್ ಯಶಸ್ವಿಯಾಗಿದ್ದರು. ಇದೇ ಕಾರಣಕ್ಕಾಗಿ ಚಿರಾಗ್ ಪಾಸ್ವಾನ್ ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮಾಹುವಾ ಕ್ಷೇತ್ರದಲ್ಲಿ ಆರ್ಜೆಡಿ ರಾಕೇಶ್ ರೋಷನ್ ವಿರುದ್ಧ ಜೆಡಿಯು ಅಸಮ್ ಪರ್ವೀನ್ 24 ಸಾವಿರ ಮತ ಪಡೆದುಕೊಂಡಿದ್ದರು. ಆದರೆ, ಎಲ್ಜೆಪಿ ಅಭ್ಯರ್ಥಿ ಸಂಜಯ್ ಕುಮಾರ್ 12 ಸಾವಿರ ಮತ ಪಡೆದುಕೊಂಡ ಕಾರಣ ಜೆಡಿಯು ಅಭ್ಯರ್ಥಿ ಸೋಲು ಕಾಣುವಂತಾಯಿತು. ಹೀಗೆ ಅನೇಕ ಕ್ಷೇತ್ರಗಳಲ್ಲಿ ಮತ ವಿಭಜನೆ ಆಗಿರುವ ಕಾರಣ ಆರ್ಜೆಡಿ ಗೆಲುವು ಸಾಧಿಸುವಂತಾಗಿದೆ. ಕುರ್ತಾ, ನೋಖಾ, ಸಸಾರಾಂ ಸೇರಿ ಅನೇಕ ಕ್ಷೇತ್ರಗಳಲ್ಲಿ ಜೆಡಿಯು ಪಕ್ಷಕ್ಕೆ ಎಲ್ಜೆಪಿ ಮುಳುವಾಗಿದ್ದು, ನಿತೀಶ್ ಕುಮಾರ್ಗೆ ತಿರುಗೇಟು ನೀಡಿದ್ದಾರೆ.