ನವದೆಹಲಿ: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ 17 ವರ್ಷದ ಬಾಲಕನ ಪತ್ತೆಗೆ ಭಾರತೀಯ ಸೇನೆ ಚೀನಾದ ನೆರವು ಕೋರಿತ್ತು. ಇದೀಗ ನಾಪತ್ತೆಯಾಗಿರುವ ಬಾಲಕನನ್ನು ಪತ್ತೆ ಮಾಡಿರುವುದಾಗಿ ಚೀನಾ ಸೇನೆ ತಿಳಿಸಿದೆ ಎಂದು ತೇಜ್‌ಪುರದ ರಕ್ಷಣಾ ಸಚಿವಾಲಯದ ಪಿಆರ್‌ಒ ಮಾಹಿತಿ ನೀಡಿದ್ದಾರೆ.
ಅರುಣಾಚಲ ಪ್ರದೇಶದಿಂದ ನಾಪತ್ತೆಯಾದ ಬಾಲಕನನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಸೇನೆಯು ನಮಗೆ ತಿಳಿಸಿದೆ. ಆತನನ್ನು ಬಿಡುಗಡೆ ಮಾಡುವ ಮತ್ತು ಭಾರತಕ್ಕೆ ಹಿಂದಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ. ನಾಪತ್ತೆಯಾದ 17 ವರ್ಷದ ಹುಡುಗನನ್ನು ಒಂದು ವಾರದಲ್ಲಿ ಭಾರತಕ್ಕೆ ಕಳಿಸಲಾಗುವುದು ಎಂದು ತೇಜ್‌ಪುರ ರಕ್ಷಣಾ ವಿಭಾಗದ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ಹೇಳಿದ್ದಾರೆ.
ಇದಕ್ಕೂ ಮೊದಲು ಭಾರತೀಯ ಸೇನೆ ಅರುಣಾಚಲ ಪ್ರದೇಶದ ಈ ಬಾಲಕನನ್ನು ಪತ್ತೆ ಮಾಡಲು ಮತ್ತು ಹಿಂದಿರುಗಿಸಲು ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಸಹಾಯವನ್ನು ಕೋರಿತ್ತು. ಚೀನಾ ಸೇನೆಯು ಆತನನ್ನು ವಶಪಡಿಸಿಕೊಂಡಿರುವ ಶಂಕೆ ಇತ್ತು ಎಂದು ತೇಜ್‌ಪುರ ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದರು.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಯುವಕನ ಅಪಹರಣ ಆರೋಪ ನಿರಾಕರಿಸಿದ ಚೀನಾ !
ಅರುಣಾಚಲ ಪ್ರದೇಶದ ಝಿಡೋದ 17 ವರ್ಷದ ಬಾಲಕ ಮಿರಾಮ್ ತಾರೋಮ್ನನ್ನು ಭಾರತ-ಚೀನಾದ ಗಡಿ ಬಳಿ ಚೀನಾದ ಪಿಎಲ್‌ಎ ಬಂಧಿಸಿದೆ ಎಂದು ವರದಿಯಾಗಿತ್ತು. ಬಳಿಕ ಭಾರತೀಯ ಸೇನೆಯು ತಕ್ಷಣವೇ ಹಾಟ್‌ಲೈನ್ ಮೂಲಕ ಪಿಎಲ್‌ಎನನ್ನು ಸಂಪರ್ಕಿಸಿದೆ. ಪ್ರೋಟೋಕಾಲ್ ಪ್ರಕಾರ, ಬಾಲಕನನ್ನು ಪತ್ತೆಹಚ್ಚಲು ಮತ್ತು ಹಿಂದಿರುಗಿಸಲು ಪಿಎಲ್‌ಎ ಸಹಾಯವನ್ನು ಕೋರಲಾಗಿತ್ತು ಎಂದು ಪಿಆರ್‌ಒ ಗುರುವಾರ ಟ್ವೀಟ್ ಮಾಡಿದ್ದರು.
ಜನವರಿ 19 ರಂದು, ಅರುಣಾಚಲದ ಪೂರ್ವ ಸಂಸದ ತಪಿರ್ ಗಾವೊ ಅವರು, 17 ವರ್ಷದ ಮಿರಾಮ್ನನ್ನು ಭಾರತದ ಭೂಪ್ರದೇಶವಾದ ಅಪ್ಪರ್ ಸಿಯಾಂಗ್ ಜಿಲ್ಲೆಯಿಂದ ಅಪಹರಿಸಲಾಗಿದೆ ಎಂದು ಆರೋಪಿಸಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ