ನವದೆಹಲಿ: ಗಡಿಗಳಲ್ಲಿ ನೆರೆ ದೇಶಗಳಾದ ಚೀನಾ ಮತ್ತು ಪಾಕಿಸ್ತಾನ ಪದೇ ಪದೆ ಕಾಲುಕೆದರಿ ಜಗಳಕ್ಕೆ ಬರುತ್ತಿದ್ದು, ಇದು ಶೀಘ್ರವೇ ಅಥವಾ ಮುಂದೆ ಎರಡೂ ರಾಷ್ಟ್ರಗಳು ಜಂಟಿಯಾಗಿ ಭಾರತದ ಮೇಲೆ ದಾಳಿ ಮಾಡುವ ಮುನ್ಸೂಚನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಮಾಜಿ ಸೈನಿಕರೊಂದಿಗೆ ನಡೆಸಿದ ಸಂವಾದದ ವಿಡಿಯೋವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ದೇಶದ ಭದ್ರತಾ ವಿಚಾರದಲ್ಲಿ ಅತ್ಯಂತ ಕಳಪೆಯಾಗಿದೆ. ಈಗಲೇ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಶೀಘ್ರವೇ ಅಥವಾ ಮುಂದಿನ ದಿನಗಳಲ್ಲಿ ಚೀನಾ ಮತ್ತು ಪಾಕಿಸ್ತಾನ ಜಂಟಿ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಗಲ್ವಾನ್ ಮತ್ತು ಡೋಕ್ಲಾಮ್‌ನಲ್ಲಿ ನಮ್ಮ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಗಳು ದಾಳಿ ನಡೆಸುವುದನ್ನು ಮುನ್ಸೂಚಿಸುತ್ತವೆ. ಪಾಕಿಸ್ತಾನದೊಂದಿಗೆ ಸೇರಿ ಡ್ರ್ಯಾಗನ್ ರಾಷ್ಟ್ರ ಭಾರತದ ಮೇಲೆ ದಾಳಿಗೆ ಬರುವ ತಂತ್ರದ ಭಾಗವಾಗಿದೆ. ಆರ್ಥಿಕವಾಗಿಯೂ ಈ ರಾಷ್ಟ್ರಗಳು ದೇಶದೊಂದಿಗೆ ಕದನಕ್ಕಿಳಿವೆ ಎಂಬುದನ್ನೂ ರಾಹುಲ್ ಗಾಂಧಿ ಸೇರಿಸಿದರು.
ಭಾರತ ಅತ್ಯಂತ ದುರ್ಬಲ: ಚೀನಾ- ಪಾಕಿಸ್ತಾನದ ಜಂಟಿ ದಾಳಿಯ ಬಗ್ಗೆ ಹೇಳುತ್ತಾ ರಾಹುಲ್ ಗಾಂಧಿ ದೇಶ ಈಗ 'ಅತ್ಯಂತ ದುರ್ಬಲವಾಗಿದೆ' ಎಂದು ಹೇಳಿದ್ದಾರೆ. ಗೊಂದಲ, ಹೊಡೆದಾಟ, ದ್ವೇಷ ವಾತಾವರಣ ನಮ್ಮಲ್ಲಿ ಹೆಚ್ಚಾಗಿದೆ. ಇದನ್ನೇ ನೆರೆರಾಷ್ಟ್ರಗಳು ಬಳಸಿಕೊಳ್ಳಲಿವೆ. ಜಂಟಿ ದಾಳಿ ಮತ್ತು ಸೈಬರ್ ವಾರ್ ನಡೆಯುವ ಸಾಧ್ಯತೆ ಇದೆ. ಮುಂದೊಂದು ದಿನ ನಮಗೆ ಅಚ್ಚರಿ ಕಾದಿದೆ. ಅದಕ್ಕಾಗಿಯೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ನಾನು ಪದೇ ಪದೇ ಸಲಹೆ ನೀಡುವೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಏನಾಗುತ್ತಿದೆ ಎಂಬುದನ್ನು ಸರ್ಕಾರ ದೇಶದ ಜನರಿಗೆ ತಿಳಿಸಬೇಕು ಎಂದು ಒತ್ತಾಯಸಿದ ಕಾಂಗ್ರೆಸ್ ನಾಯಕ, ನೆರೆ ರಾಷ್ಟ್ರಗಳು ಯಾವುದೇ ಸಂಚು ರೂಪಿಸುವ ಮುನ್ನವೇ ನಾವು ಅದನ್ನು ಸಶಕ್ತವಾಗಿ ಎದುರಿಸಲು ಈಗಲೇ ಕ್ರಮ ಕೈಗೊಳ್ಳಬೇಕು. ಐದು ವರ್ಷಗಳ ಹಿಂದೆಯೇ ಸರ್ಕಾರ ಈ ಕ್ರಮಕ್ಕೆ ಮುಂದಾಗಬೇಕಿತ್ತು. ಆದರೆ, ಅದನ್ನು ಮಾಡಲಿಲ್ಲ. ಈಗಲಾದರೂ ಶೀಘ್ರವೇ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ದೇಶವೇ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಕಾಂಗ್ರೆಸ್ ನಾಯಕ ಭವಿಷ್ಯ ನುಡಿದಿದ್ದಾರೆ.
ಸಂವಾದದಲ್ಲಿ ಹೊಡೆದಾಟದ ಬಗ್ಗೆ ಪ್ರಸ್ತಾಪ: 2020 ರಲ್ಲಿ ಪೂರ್ವ ಲಡಾಖ್‌ನಲ್ಲಿ ನೈಜ ನಿಯಂತ್ರಣ ರೇಖೆಯಲ್ಲಿ ಚೀನಿ ಸೈನಿಕರು ಗಡಿ ದಾಟಿ ಬಂದು ಕಿತ್ತಾಡಿದ್ದನ್ನು ಸಂವಾದದಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿದರು. ಅಂದಿನ ಹೊಡೆದಾಟದಲ್ಲಿ 20 ಭಾರತೀಯ ಯೋಧರು ಮತ್ತು ಚೀನಿ ಸೈನಿಕರು ಗಾಯಗೊಂಡರು. ಈಚೆಗೆ ಮತ್ತೆ ಗಡಿಯಲ್ಲಿ ಹೊಡೆದಾಟದ ಬಗ್ಗೆಯೂ ಮಾತು ತೆಗೆದರು.
ಆಕ್ರಮಣಕಾರಿ ನೀತಿ ಮತ್ತು ಗಲ್ವಾನ್ ಕಣಿವೆಯಲ್ಲಿ ನಡೆದ ರಕ್ತಸಿಕ್ತ ಘರ್ಷಣೆಗಳು ಭಾರತ-ಚೀನಾ ಸಂಬಂಧವನ್ನು ಹಳಸುವಂತೆ ಮಾಡಿದೆ. ಉಭಯ ಸೇನೆಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಮುಖಾಮುಖಿ ಮುಗಿದಿಲ್ಲ.
ದೇಶದ ಗಡಿಯಲ್ಲಿ ಚೀನಿ ಸೈನಿಕರು: ಚೀನಾ ಸೈನಿಕರು ನಮ್ಮ ದೇಶದ ಗಡಿಯಲ್ಲಿ ದಾಟಿ ಬಂದಿದ್ದಾರೆ. ಅವರು ನಮ್ಮ ಭೂಪ್ರದೇಶವನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಈ ಬಗ್ಗೆ ಕೇಂದ್ರ ಸರ್ಕಾರ ಜನರಿಗೆ ಮಾಹಿತಿ ನೀಡುತ್ತಿಲ್ಲ. ಗಡಿಯಲ್ಲಿ ನಿಖರವಾಗಿ ಏನಾಗಿದೆ ಎಂಬುದನ್ನು ತಿಳಿಸಬೇಕು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಡಳಿತದಲ್ಲಿ ದೇಶ ವಿಭಿನ್ನವಾದ ವಿದೇಶಾಂಗ ನೀತಿಯನ್ನು ಅನುಸರಿಸಿತ್ತು ಎಂಬುದನ್ನು ರಾಹುಲ್ ನೆನಪಿಸಿಕೊಂಡರು.
ಅಂದು ಪಾಕಿಸ್ತಾನ ಮತ್ತು ಚೀನಾವನ್ನು ಪ್ರತ್ಯೇಕವಾಗಿ ಎದುರಿಸಲಾಗುತ್ತಿತ್ತು. ಆ ಎರಡೂ ರಾಷ್ಟ್ರಗಳು ಒಂದಾಗದಂತೆ ಅಂದಿನ ಸರ್ಕಾರ ನೋಡಿಕೊಂಡಿತ್ತು. ಆದರೆ, ಈಗಿನ ಸರ್ಕಾರ ಇದರಲ್ಲಿ ವೈಫಲ್ಯ ಕಂಡಿದೆ. ಶತ್ರುಗಳು ಈಗ ಒಂದಾಗಿದ್ದಾರೆ. ಇದು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯವಾಗಿದೆ ಎಂದು ಆರೋಪಿಸಿದರು.
ಓದಿ: ಸಿಕ್ಕೀಂ ಸೇನಾ ವಾಹನ ದುರಂತ ಪ್ರಕರಣ: ಏಳು ಜನ ಯೋಧರ ಅಂತ್ಯಸಂಸ್ಕಾರ, ಮೊಳಗಿದ ಅಮರ್ ರಹೇ ಘೋಷಣೆ