ಖೋರ್ಧಾ( ಒಡಿಶಾ): ಜೀವ ಜಗತ್ತೇ ವಿಸ್ಮಯ.. ಅದರಲ್ಲೂ ಪಕ್ಷಿಗಳ ನಡವಳಿಕೆಗಳು ನಮ್ಮಲ್ಲಿ ಮೂಡಿಸುವ ಅಚ್ಚರಿಗಳಿಗೇನೂ ಕೊರತೆಯಿಲ್ಲ. ವಲಸೆ ಪಕ್ಷಿಗಳಂತೂ ಋತುಮಾನಗಳಿಗೆ ಅನುಗುಣವಾಗಿ ಸಾವಿರಾರು ಕಿಲೋಮೀಟರ್ ದೂರಕ್ಕೆ ಸಾಗುವುದು ನಿಜಕ್ಕೂ ಬೆರಗು ಮೂಡಿಸುತ್ತದೆ.
ಆದರೆ, ಇತ್ತೀಚೆಗೆ ಕೆಲವೊಂದು ಪ್ರಾಕೃತಿಕ ಅಥವಾ ಪ್ರಕೃತಿಯಲ್ಲಿ ಮಾನವ ಹಸ್ತಕ್ಷೇಪದ ಕಾರಣದಿಂದಾಗಿ ಪಕ್ಷಿಗಳ ವಲಸೆಯ ಮೇಲೆ ಪರಿಣಾಮ ಉಂಟಾಗುತ್ತಿದೆ. ಇದಕ್ಕೆ ಸಾಕ್ಷಿ ಚಿಲ್ಕಾ ಅಥವಾ ಚಿಲಿಕಾ ಸರೋವರ.
ಒಡಿಶಾದಲ್ಲಿರುವ ಏಷ್ಯಾದ ಅತಿ ದೊಡ್ಡ ಉಪ್ಪು ನೀರಿನ ಸರೋವರವಾದ ಚಿಲಿಕಾ ಸರೋವರಕ್ಕೆ ಪ್ರತಿವರ್ಷ ಲಕ್ಷಾಂತರ ಪಕ್ಷಿಗಳು ವಲಸೆ ಬರುತ್ತಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಚಿಲಿಕಾ ಸರೋವರಕ್ಕೆ ವಲಸೆ ಬರುವ ಪಕ್ಷಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಸುಮಾರು ಒಂದೂವರೆ ಲಕ್ಷ ಪಕ್ಷಿಗಳು ಚಿಲ್ಕಾ ಸರೋವರಕ್ಕೆ ಗೈರಾಗಿವೆ.
ಈ ವಿಚಾರ ಗೊತ್ತಾಗಿದ್ದು, ಚಿಲಿಕಾ ವನ್ಯಜೀವಿ ವಿಭಾಗದಲ್ಲಿ ನಡೆದ ವಾರ್ಷಿಕ ಪಕ್ಷಿ ಗಣತಿಯಲ್ಲಿ. ಮಂಗಳವಾರ ಪಕ್ಷಿ ಗಣತಿ ನಡೆಸಲಾಗಿದ್ದು, 183 ಪ್ರಬೇಧಗಳ ಸುಮಾರು 10,74,173 ಪಕ್ಷಿಗಳು ನಲ್ಬನ್ ಪಕ್ಷಿಧಾಮಕ್ಕೆ ಬಂದಿದೆ. ಈ ನಲ್ಬನ್ ಪಕ್ಷಿಧಾಮ ಚಿಲ್ಕ್ ಸರೋವರದ ಭಾಗವಾಗಿದೆ.
ಕಳೆದ ವರ್ಷ ನಡೆದ ಪಕ್ಷಿ ಗಣತಿ ವರದಿಯ ಪ್ರಕಾರ 190 ಜಾತಿಗಳ ಸುಮಾರು 12,42,826 ಪಕ್ಷಿಗಳು ನಲ್ಬನ್ ಪಕ್ಷಿಧಾಮಕ್ಕೆ ಭೇಟಿ ಕೊಟ್ಟಿದ್ದವು. ಅಂದರೆ ಈ ಬಾರಿಗೆ 1,68,653 ಪಕ್ಷಿಗಳು ನಲ್ಬನ್ ಪಕ್ಷಿಧಾಮಕ್ಕೆ ಗೈರಾಗಿವೆ ಎಂದು ತಿಳಿದು ಬಂದಿದೆ. ಆದರೆ, ಪಕ್ಷಿಗಳ ಸಂಖ್ಯೆ ಇಳಿಮುಖವಾಗಲು ಕಾರಣವೇನೆಂದು ತಿಳಿದುಬಂದಿಲ್ಲ.
ಸುಮಾರು 105 ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 21 ತಂಡಗಳು ದೇಶೀಯ ಮತ್ತು ವಲಸೆ ಹಕ್ಕಿಗಳ ಗಣತಿಯಲ್ಲಿ ತೊಡಗಿದ್ದವು. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮಧ್ಯಾಹ್ನ 12 ಗಂಟೆಯವರೆಗೆ ನಡೆದಿದೆ.
ತಂಡಗಳಲ್ಲಿ ಚಿಲಿಕಾ ಅಭಿವೃದ್ಧಿ ಪ್ರಾಧಿಕಾರ (CDA), ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS), ವೈಲ್ಡ್ ಒಡಿಶಾ, ಫ್ರೋ ವಿತ್ ನೇಚರ್, ಎಲಿಫೆಂಟ್ ಟ್ರಸ್ಟ್‌ನ ತಜ್ಞರು ಮತ್ತು ವಿವಿಧ ಸಾಮಾಜಿಕ ಸಂಸ್ಥೆಗಳ ಸದಸ್ಯರು ಭಾಗಿಯಾಗಿದ್ದರು.
ಶತಪದ, ರಂಭಾ, ಬಾಳುಗಾಂವ್, ತಾಂಗಿ ಮತ್ತು ಚಿಲಿಕಾ ಸೇರಿದಂತೆ ಐದು ಶ್ರೇಣಿಗಳಲ್ಲಿ ಪಕ್ಷಿಗಳ ಗಣತಿಯನ್ನು ನಡೆಸಲಾಗಿತ್ತು. ಒಡಿಶಾದ ಪುರಿ, ಖೋರ್ಧಾ ಮತ್ತು ಗಂಜಾಂ ಜಿಲ್ಲೆಗಳಲ್ಲಿ ಹರಡಿರುವ ಈ ಸರೋವರವು ಸುಮಾರು 1,100 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.
ಇದನ್ನೂ ಓದಿ: Walking Fish: 22 ವರ್ಷಗಳ ನಂತರ ಪತ್ತೆಯಾಯ್ತು ನಡೆದಾಡುವ ಮೀನು!