ನೆಹರೂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳ ಮೇಲಿನ ಅವರ ವಾತ್ಸಲ್ಯ ಎಷ್ಟಿತ್ತು ಎಂದರೆ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದಕ್ಕೆ ನೆಹರೂ ಬಯಸುತ್ತಿದ್ದರಂತೆ. ಆದ್ದರಿಂದಲೇ ಮಕ್ಕಳೆಲ್ಲರಿಗೂ ನೆಹರೂ ಎಂದಿಗೂ ಪ್ರೀತಿಯ ಚಾಚಾ ಆಗಿ ಇರುತ್ತಿದ್ದರು. ಮಕ್ಕಳು ಸಹ ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ಇಂದಿಗೂ ನೆಹರು ಮಕ್ಕಳ ನೆಚ್ಚಿನ ಚಾಚಾ ಅಗಿಯೇ ಹೆಚ್ಚು ಹೆಸರುವಾಸಿ.
ಮಕ್ಕಳ ಹಕ್ಕುಗಳನ್ನು ರಕ್ಷಿಸಲು,ಅವರ ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳ ದಿನವನ್ನು ಬಾಲ್ ದಿವಸ್ ಎಂದು ಕರೆಯಲಾಗುತ್ತದೆ. ಚಾಚಾ ನೆಹರು ಅವರು ಮುಖ್ಯವಾಗಿ ಮಕ್ಕಳು ಮತ್ತು ಗುಲಾಬಿಗಳ ಮೇಲೆ ಹೆಚ್ಚು ಒಲವು ಹೊಂದಿದ್ದರು. ಜವಾಹರಲಾಲ್ ನೆಹರೂ ಅವರ ಪ್ರಕಾರ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹಾಗಾಗಿ ಅವರನ್ನು ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಸಾಕಬೇಕು ಎಂದು ಅವರು ಹೇಳಿದ್ದರು.
ಮಕ್ಕಳ ದಿನಾಚರಣೆಯ ಇತಿಹಾಸ ಮತ್ತು ಮಹತ್ವ:
ಭಾರತೀಯ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ಪಂಡಿತ್ ಜವಾಹರಲಾಲ್ ನೆಹರೂ ಅವರು ಮಕ್ಕಳ ಬಗ್ಗೆಯೂ ತುಂಬಾ ಒಲವು ಹೊಂದಿದ್ದರು. ಆಗಾಗ್ಗೆ ಅವರೊಂದಿಗೆ ಬೆರತು ಫೋಟೋ ಕೂಡ ತೆಗೆಸಿಕೊಳ್ಳುತ್ತಿದ್ದರು. ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಜನಪ್ರಿಯತೆಯಿಂದಾಗಿ ಅವರನ್ನು ಚಾಚಾ ನೆಹರು ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.
ಜವಾಹರಲಾಲ್ ನೆಹರು ಅವರು ಮಕ್ಕಳ ಮೇಲಿನ ವಾತ್ಸಲ್ಯ ಮತ್ತು ಪ್ರೀತಿಗೆ ಪ್ರಸಿದ್ಧರಾಗಿದ್ದರು. ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಅವರು ಪ್ರತಿಪಾದಿಸಿದರು. “ಇಂದಿನ ಮಕ್ಕಳು ನಾಳೆಯ ಭಾರತವನ್ನು ನಿರ್ಮಾಣ ಮಾಡುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದು ಅವರು ಹೇಳುತ್ತಾರೆ. ಅವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು ಹಾಗೂ ದೇಶದಲ್ಲಿ ಕಾಲೇಜುಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ನಂತಹ ಭಾರತದ ಪ್ರತಿಷ್ಠಿತ ಸಂಸ್ಥೆಗಳ ಸ್ಥಾಪನೆಯಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಅವರು ಯಾವಾಗಲೂ ದೇಶದ ಯುವ ಮನಸ್ಸುಗಳನ್ನು ನಂಬಿದ್ದರು ಮತ್ತು ಅವರ ಕಲ್ಯಾಣ ಹಾಗೂ ಬೆಳವಣಿಗೆಗೆ ಒತ್ತು ನೀಡಿದರು. ಆದ್ದರಿಂದ ಅವರ ಜನ್ಮದಿನದಂದು ಭಾರತದ ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನಡೆಸಲಾಗುತ್ತದೆ.
ಭಾರತದಲ್ಲಿ ಮಕ್ಕಳ ದಿನಾಚರಣೆ:
ಭಾರತದಾದ್ಯಂತ ಈ ದಿನದಂದು ಸಾಂಸ್ಕೃತಿಕ ಮತ್ತು ವಿನೋದ ಚಟುವಟಿಕೆಗಳು ಸೇರಿದಂತೆ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಶಾಲೆಗಳು, ಎನ್‌ಜಿಒಗಳು, ಖಾಸಗಿ ಸಂಸ್ಥೆಗಳು ಮತ್ತು ಇತರವುಗಳು ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಲು ಮತ್ತು ಅವರಿಗೆ ಸಂತೋಷ ಹಾಗೂ ಉಲ್ಲಾಸವನ್ನುಂಟುಮಾಡಲು ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುತ್ತವೆ. ಟಿವಿ ಚಾನೆಲ್‌ಗಳು ನವೆಂಬರ್ 14 ರಂದು ಮಕ್ಕಳಿಗಾಗಿ ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತವೆ. ತಮ್ಮ ಮಕ್ಕಳನ್ನು ಸಂತೋಷಪಡಿಸಲು ಪೋಷಕರು ಈ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸುತ್ತಾರೆ. ಅವರು ತಮ್ಮ ಪುತ್ರರು ಮತ್ತು ಪುತ್ರಿಯರಿಗೆ ಉಡುಗೊರೆಗಳನ್ನು, ಶುಭಾಶಯ ಪತ್ರಗಳನ್ನು ವಿತರಿಸುತ್ತಾರೆ. ಅವರು ಪಿಕ್ನಿಕ್, ಲಾಂಗ್ ಡ್ರೈವ್‌ನಲ್ಲಿ ಹೋಗುತ್ತಾರೆ ಮತ್ತು ಪಾರ್ಟಿಯೊಂದಿಗೆ ದಿನವನ್ನು ಆನಂದಿಸುತ್ತಾರೆ.
ವಿಶ್ವದಾದ್ಯಂತ ಮಕ್ಕಳ ದಿನಾಚರಣೆ:
ಪ್ರಪಂಚದಲ್ಲಿ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವರು. ಈ ದಿನವನ್ನು ಮಕ್ಕಳ ಬಾಲ್ಯವನ್ನು ಸಂಭ್ರಮದಿಂದ ಕಾಣಲು ಆಚರಿಸಲಾಗುವುದು. ಈ ದಿನವನ್ನು ಬಾಲ್ಯದ ಹೆಸರಿನಲ್ಲಿ ಆಚರಿಸಲಾಗುವುದು.
ಮಕ್ಕಳ ದಿನವನ್ನು 1959 ಕ್ಕೆ ಮೊದಲು ಜಗತ್ತಿನಾದ್ಯಂತ ಅಕ್ಟೋಬರ್ ತಿಂಗಳಲ್ಲಿ ಆಚರಿಸುತ್ತಿದ್ದರು. ಈ ದಿನ ವನ್ನು ವಿಶ್ವ ಸಂಸ್ಥೆಯ ಸಾಮಾನ್ಯಸಭೆಯು ತೀರ್ಮಾನಿಸಿದಂತೆ ಪ್ರಥಮ ಬಾರಿಗೆ 1954 ರಲ್ಲಿ ಆಚರಿಸಲಾಯಿತು. ಇದನ್ನು ಮೂಲಭೂತ ಉದ್ಧೇಶ ಸಮುದಾಯದ ವಿನಿಮಯದ ಹೆಚ್ಚಳ ಮತ್ತು ಮಕ್ಕಳ ತಿಳುವಳಿಕೆ ಜಾಸ್ತಿ ಮಾಡುವುದು, ಅಲ್ಲದೆ ಮಕ್ಕಳಿಗೆ ಅನುಕೂಲವಾದ ಕಲ್ಯಾಣ ಕಾರ್ಯಕ್ರಮಗಳನ್ನು ಉತ್ತೇಜಿಸಲು ಜಗತ್ತಿನಾದ್ಯಂತ ಆಚರಣೆಯನ್ನು ಪ್ರಾರಂಭಿಸಲಾಯಿತು.
ನವೆಂಬರ್ 20ನ್ನು ವಿಶ್ವ ಮಕ್ಕಳ ದಿನವಾಗಿ ಆಚರಿಸಲು ಕಾರಣ, ಅದು ವಿಶ್ವ ಸಂಸ್ಥೆಯು ಸಾಮಾನ್ಯ ಸಭೆಯು ಮಕ್ಕಳ ಹಕ್ಕುಗಳ ಘೋಷಣೆಯನ್ನು 1959ರಲ್ಲಿ ಅಂಗೀಕರಿಸಿದ ದಿನ. ಮಕ್ಕಳ ಹಕ್ಕುಗಳ ಸಮಾವೇಶವು 1989 ರಲ್ಲಿ ಅದಕ್ಕೆ ಸಹಿ ಮಾಡಿತು. ಆಗಿನಿಂದ 191 ದೇಶಗಳು ಇದನ್ನು ಒಪ್ಪಿವೆ.
ಭಾರತದಲ್ಲಿ ಮಕ್ಕಳನ್ನು ಪೀಡಿಸುವ ಪ್ರಮುಖ ಸಮಸ್ಯೆಗಳು:
ಭಾರತದಲ್ಲಿ ಮಕ್ಕಳ ಮರಣ ಪ್ರಮಾಣ - 1990 ರಿಂದ 2019ರವರೆಗೆ ಗಣನೀಯವಾಗಿ ಕುಸಿದಿದೆ.
ಮಕ್ಕಳ ಕಳ್ಳಸಾಗಣೆ - ಪ್ರತಿ ಎಂಟು ನಿಮಿಷಗಳಿಗೊಮ್ಮೆ ಭಾರತದಲ್ಲಿ ಮಕ್ಕಳು ಕಾಣೆಯಾಗುತ್ತಿದ್ದಾರೆ. ವಾರ್ಷಿಕ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) “ಕ್ರೈಮ್ ಇನ್ ಇಂಡಿಯಾ” 2019 ರ ವರದಿಯ ಪ್ರಕಾರ, ಕಳೆದ ವರ್ಷ ಒಟ್ಟು 73,138 ಮಕ್ಕಳು ಕಾಣೆಯಾಗಿದ್ದಾರೆ. ಕಾಣೆಯಾದ ಮಕ್ಕಳ ಸಂಖ್ಯೆ 2019 ರಲ್ಲಿ ಶೇ.8.9ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2018 ರಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆ 67,134 ಆಗಿತ್ತು. ಒಟ್ಟು 71,253 ಮಕ್ಕಳನ್ನು ವಶಪಡಿಸಿಕೊಳ್ಳಲಾಗಿದೆ.
ಸ್ತ್ರೀ ಭ್ರೂಣ ಹತ್ಯೆ: ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ) 2020 ರ ರಾಜ್ಯ ಜನಸಂಖ್ಯಾ ವರದಿಯ ಪ್ರಕಾರ, ಕಳೆದ 50 ವರ್ಷಗಳಲ್ಲಿ 46 ದಶಲಕ್ಷ ಮಹಿಳೆಯರು ಭಾರತದಿಂದ ನಾಪತ್ತೆಯಾಗಿದ್ದಾರೆ. ಲಿಂಗ- ಪಕ್ಷಪಾತದ ಲೈಂಗಿಕ ಬೇದದಿಂದ 4.6 ಲಕ್ಷದಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು: ವಾಸ್ತವವಾಗಿ, ಸರಿಸುಮಾರು 60 ಮಿಲಿಯನ್ ಇದು ಸರಿಸುಮಾರು ಅರ್ಧದಷ್ಟು ಭಾರತದ ಎಲ್ಲ ಮಕ್ಕಳಲ್ಲಿ ಇದು ಕಾಡುತ್ತಿದೆ. ಸುಮಾರು 45 ಪ್ರತಿಶತ ಕುಂಠಿತಗೊಂಡಿದೆ, 21 ಶೇಕಡಾ ವ್ಯರ್ಥವಾಗುತ್ತಿದೆ, 57 ಪ್ರತಿಶತ ವಿಟಮಿನ್ ಎ ಕೊರತೆಯಿದೆ, ಮತ್ತು ಶೇ. 75 ರಷ್ಟು ರಕ್ತಹೀನತೆ.
ಮಕ್ಕಳ ಮೇಲಿನ ಅಪರಾಧಗಳು: 2018 ಕ್ಕೆ ಹೋಲಿಸಿದರೆ 2019 ರಲ್ಲಿ ಮಕ್ಕಳ ಮೇಲಿನ ಅಪರಾಧಗಳು ಶೇಕಡಾ 4.5 ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ "ಕ್ರೈಮ್ ಇನ್ ಇಂಡಿಯಾ" 2019 ರ ವರದಿಯು ಬಹಿರಂಗಪಡಿಸಿದೆ. ಎನ್‌ಸಿಆರ್‌ಬಿ ತನ್ನ ವರದಿಯಲ್ಲಿ, ದೇಶದಲ್ಲಿ 2019 ರಲ್ಲಿ ಮಕ್ಕಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ 1,48,185 ಅಪರಾಧಗಳು ವರದಿಯಾಗಿವೆ.
ಮಕ್ಕಳಿಗೆ ಶಿಕ್ಷಣದ ಪ್ರವೇಶ: ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿಯ (ಎನ್‌ಎಸ್‌ಎಸ್‌ಒ) ವರದಿಯ ಪ್ರಕಾರ, 13 ವರ್ಷ ವಯಸ್ಸಿನ 32 ದಶಲಕ್ಷ ಭಾರತೀಯ ಮಕ್ಕಳು ಯಾವುದೇ ರೀತಿಯ ಶಿಕ್ಷಣ ಪಡೆದುಕೊಂಡಿಲ್ಲ. ಅವರಲ್ಲಿ ಹೆಚ್ಚಿನವರು ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರು.
1964ರಲ್ಲಿ ನೆಹರೂ ಅವರು ಕೊನೆಯುಸಿರೆಳೆದ ನಂತರ ಅವರ ಹುಟ್ಟಿದ ದಿನವನ್ನು ಅವರು ಪ್ರೀತಿಸುತ್ತಿದ್ದ ಮಕ್ಕಳಿಗೆ ಮೀಸಲಿಡಬೇಕೆಂದು ನಿರ್ಧರಿಸಲಾಗುತ್ತದೆ. ಹಾಗಾಗಿ ಅವರು ಹುಟ್ಟಿದ ದಿನ ನವೆಂಬರ್ 14ನ್ನು ಮಕ್ಕಳಿಗಾಗಿ ಮೀಸಲಿಟ್ಟು, ಪ್ರತಿವರ್ಷ ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ನ.20 ರಂದು ವಿಶ್ವಸಂಸ್ಥೆ ಘೋಷಣೆಯಂತೆ ಸಾರ್ವತ್ರಿಕ ಮಕ್ಕಳ ದಿನವೆಂದು ಆಚರಿಸಲಾಗುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಆಚರಿಸುವ ದಿನವಾದರೆ ನ.14ರಂದು ನಮ್ಮ ದೇಶದ ಪಾಲಿನ ಮಕ್ಕಳಿಗೆ ಹಬ್ಬದ ದಿನ.