ಪಾಟ್ನಾ(ಬಿಹಾರ): ಇಲ್ಲಿನ ಧನ್ರುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಐದು ವರ್ಷದ ಬಾಲಕನ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿರುವ ಕಾರಣ ಬಾಲಕ ಪ್ರಜ್ಞೆ ತಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ತಪ್ಪಿತಸ್ಥ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಈ ಘಟನೆ ನಡೆದಿದ್ದು, ರಾಕ್ಷಸನಾಗಿ ಮಾರ್ಪಟ್ಟಿರುವ ಶಿಕ್ಷಕ ವಿದ್ಯಾರ್ಥಿ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿರುವ ರಭಸಕ್ಕೆ ಕೋಲು ಸಹ ಮುರಿದು ಹೋಗಿದೆ. ಈ ಘಟನೆ ವೀಕ್ಷಣೆ ಮಾಡಿರುವ ಇತರ ವಿದ್ಯಾರ್ಥಿಗಳು ಮೂಕ ಪ್ರೇಕ್ಷಕರಾಗಿದ್ದು, ಭಯಗೊಂಡಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿರುವ ವಿದ್ಯಾರ್ಥಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ವರದಿಯಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಶಿಕ್ಷಕ ಛೋಟು ಅಧಿಕ ರಕ್ತದೊತ್ತಡ(ಹೈ ಬಿಪಿ) ಸಮಸ್ಯೆಯಿಂದ ಬಳಲುತ್ತಿದ್ದು, ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಇನ್ಸ್ಟಿಟ್ಯೂಟ್ ಮಾಲೀಕ ಅಮರಕಾಂತ್ ಕುಮಾರ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರೊಬ್ಬರು ಇದರ ವಿಡಿಯೋ ರೆಕಾರ್ಡ್ ಮಾಡಿದ್ದು, ಅದನ್ನ ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ಘಟನೆ ಇತರ ಪೋಷಕರಲ್ಲೂ ಭೀತಿ ಮೂಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಇಲಾಖೆ ಅಧಿಕಾರಿ ವೈಭವ್ ಶರ್ಮಾ, ತಪ್ಪು ಮಾಡಿರುವ ಶಿಕ್ಷಕ ಹಾಗೂ ಕೋಚಿಂಗ್ ಸೆಂಟರ್ ಬಗ್ಗೆ ಗೊತ್ತಾಗಿದ್ದು, ಶೀಘ್ರದಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.