ನವದೆಹಲಿ: ಛತ್ತೀಸ್ಗಢದಲ್ಲಿ ಸಿಎಂ ಬದಲಾವಣೆಗೆ ಒತ್ತಾಯ ಕೇಳಿಬರುತ್ತಿದೆ. ಇದರಿಂದಾಗಿ ಅಲ್ಲಿನ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಈ ಬೆನ್ನಲ್ಲೇ ಛತ್ತಿಸ್ಗಢದ ಕೆಲವು ಕಾಂಗ್ರೆಸ್ ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ಪಿ.ಎಲ್.ಪುನಿಯಾ ಅವರ ದೆಹಲಿ ನಿವಾಸದಲ್ಲಿ ತಡರಾತ್ರಿ ಸಭೆ ನಡೆಸಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವೆ ಇಂದು ಕಾಂಗ್ರೆಸ್ನಲ್ಲಿರುವ ಭಿನ್ನಾಭಿಪ್ರಾಯದ ಕುರಿತು ಸಭೆ ನಡೆಯಲಿದೆ. ಇದಕ್ಕೂ ಮೊದಲೇ ಪಿ.ಎಲ್.ಪುನಿಯಾ ಅವರೊಂದಿಗೆ ಕಾಂಗ್ರೆಸ್ ಶಾಸಕರು ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಭೂಪೇಶ್ ಬಘೇಲ್ ರಾಹುಲ್ ಗಾಂಧಿಯೊಂದಿಗೆ ಎರಡನೇ ಬಾರಿ ಇಂದು ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಬುಧವಾರ ರಾಹುಲ್ ಅವರನ್ನು ಭೇಟಿಯಾಗಿ ಸಭೆ ನಡೆಸಿ, ಛತ್ತೀಸ್‌ಗಢ ಕಾಂಗ್ರೆಸ್ನಲ್ಲಿರುವ ಭಿನ್ನಮತದ ಬಗ್ಗೆ ಚರ್ಚಿಸಿದ್ದರು.
ರಾಹುಲ್ ಅವರೊಂದಿಗೆ ಚರ್ಚೆ ನಡೆಸಿ, ವಾಪಸಾಗಿದ್ದ ಅವರು ರಾಯಪುರದಲ್ಲಿ, 'ಎರಡೂವರೆ ವರ್ಷಗಳ ಪ್ಲ್ಯಾನ್' ಬಗ್ಗೆ ಮಾತನಾಡುವವರು, ಸರ್ಕಾರದಲ್ಲಿ ಅಸ್ಥಿರತೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಸೋನಿಯಾ ಗಾಂಧಿ ಅಥವಾ ರಾಹುಲ್ ಸೂಚನೆ ನೀಡಿದಾಗ ಮಾತ್ರ ನಾನು ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಜಾರಿಯಾಗುತ್ತಾ ಎರಡೂವರೆ ವರ್ಷಗಳ ಪ್ಲ್ಯಾನ್?
ಆರಂಭದಿಂದಲೂ ಛತ್ತೀಸ್‌ಗಢ ಕಾಂಗ್ರೆಸ್ನಲ್ಲಿ ಆಗಾಗ ಸ್ವಲ್ಪ ಮಟ್ಟದ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿದ್ದವು. ಡಿಸೆಂಬರ್ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಗೆದ್ದಾಗ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.
ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದ, ಈಗ ಆರೋಗ್ಯ ಸಚಿವ ತ್ರಿಭುವನೇಶ್ವರ್ ಸರಣ್ ಸಿಂಗ್ ಡಿಯೋ ಅಥವಾ ಟಿ.ಎಸ್.ಡಿಯೋ ಅವರೇ ಗೆಲುವಿಗೆ ಕಾರಣ ಎಂದು ಅವರ ಬೆಂಬಲಿಗರು ಹೇಳಿಕೊಂಡಿದ್ದು, ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಸಿಎಂ ಸ್ಥಾನ ಟಿ.ಎಸ್.ಡಿಯೋಗೆ ಒಲಿಯಲಿಲ್ಲ.
ಈಗ ಜೂನ್ನಲ್ಲಿ ಬಘೇಲ್ ಸರ್ಕಾರವು ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಮತ್ತೆ ಸಿಎಂ ಬದಲಾವಣೆಗೆ ಒತ್ತಡ ಆರಂಭವಾಗಿದ್ದು, ಕೆಲವು ಶಾಸಕರು ಪುನಿಯಾರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದ್ದಾರೆ. ಸಿಎಂ ಬಘೇಲ್ ಇಂದು ರಾಹುಲ್ ಅವರನ್ನು ಭೇಟಿಯಾಗಲಿದ್ದು, ಮಾತುಕತೆಯ ನಂತರದ ಬೆಳವಣಿಗೆಗಳು ಮತ್ತಷ್ಟು ಕುತೂಹಲ ಕೆರಳಿಸಲಿವೆ.
ಇದನ್ನೂ ಓದಿ: Kabul Blasts: ಕಾಬೂಲ್ ದಾಳಿ ಭಯಾನಕ, ಹೇಯ ಕೃತ್ಯ- ವಿಶ್ವಸಂಸ್ಥೆ