ಛತ್ತೀಸ್‌ಗಢ: ನಕ್ಸಲರು ಮತ್ತೆ ಅಟ್ಟಹಾಸ ಮುಂದುವರೆಸಿದ್ದಾರೆ. ನಾರಾಯಣಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಛತ್ತೀಸ್‌ಗಢ ಸಶಸ್ತ್ರ ಪಡೆಯ (ಸಿಎಎಫ್) ಹೆಡ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ ಎಂದು ಛತ್ತೀಸ್‌ಗಢ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಸಾಗರ್ ಸಿದರ್ ತಿಳಿಸಿದ್ದಾರೆ.
"ಓರ್ಚಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಟಮ್ ಗ್ರಾಮದ ಬಳಿ ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಓರ್ಚಾ ಠಾಣಾ ವ್ಯಾಪ್ತಿಯಲ್ಲಿ ನಕ್ಸಲೀಯರು ಬ್ಯಾನರ್ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾದ ಕೂಡಲೇ ಸಿಎಎಫ್ ತಂಡವು ಕಾರ್ಯಾಚರಣೆ ಆರಂಭಿಸಿತು. ತಮ್ಮ ತಂಡವು ಗಸ್ತು ತಿರುಗುವಾಗ ಜಶ್‌ಪುರ ಜಿಲ್ಲೆಗೆ ಸೇರಿದ ಸಿಎಎಫ್‌ನ 16ನೇ ಬೆಟಾಲಿಯನ್‌ನ ಹೆಡ್ ಕಾನ್ಸ್ಟೇಬಲ್ ಸಂಜಯ್ ಲಾಕ್ರಾ ಅವರು ಸಕ್ರಿಯ ಸುಧಾರಿತ ಸ್ಫೋಟಕ ಸಾಧನದ ಮೇಲೆ ಆಕಸ್ಮಿಕವಾಗಿ ಹೆಜ್ಜೆ ಇಟ್ಟಿದ್ದು, ಭೀಕರ ಸ್ಫೋಟ ಸಂಭವಿಸಿತು. ಕೂಡಲೇ ಲಾಕ್ರಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಸ್ಫೋಟ ಸಂಭವಿಸಿದ ವೇಳೆಗೆ ಅವರು ಸಾವನ್ನಪ್ಪಿದ್ದರು" ಎಂದು ಮಾಹಿತಿ ನೀಡಿದರು. ವಿಪರ್ಯಾಸವೆಂದರೆ, ಓರ್ಚಾ ಪೊಲೀಸ್ ಠಾಣೆಯು ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 300 ಕಿಲೋ ಮೀಟರ್ ದೂರದಲ್ಲಿದೆ.
ಇದನ್ನೂ ಓದಿ: ಪುಲ್ವಾಮ: ಗುಂಡು ಹಾರಿಸಿ ಕಾಶ್ಮೀರಿ ಪಂಡಿತನ ಹತ್ಯೆಗೈದ ಉಗ್ರರು!
ನಿನ್ನೆ ಮೂವರು ಯೋಧರು ಹುತಾತ್ಮ: ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಮೂವರು ಜಿಲ್ಲಾ ಮೀಸಲು ಗಾರ್ಡ್‌ಗಳನ್ನು (ಡಿಆರ್‌ಜಿ) ಹತ್ಯೆ ಮಾಡಲಾಗಿತ್ತು. ಇನ್ನೂ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಇಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಫೆಬ್ರವರಿ 20 ರಂದು ರಾಜ್ಯದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದ ನಕ್ಸಲೀಯರ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟ: ಐವರು ಸಿಆರ್ಪಿಎಫ್ ಯೋಧರಿಗೆ ಗಾಯ