ಡೆಹರಾಡೂನ್: ಉತ್ತರಾಖಂಡದಲ್ಲಿ ಚಾರ್ಧಾಮ್ ಯಾತ್ರೆ ಪ್ರಾರಂಭವಾದ 10 ದಿನಗಳಲ್ಲಿ 29 ಭಕ್ತರು ಸಾವನ್ನಪ್ಪಿದ್ದಾರೆ. ಯಾತ್ರಾರ್ಥಿಗಳ ಹೆಚ್ಚಿನ ಸಾವುಗಳು ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಇತರ ಹಿಮಾಲಯದ ಕಾಯಿಲೆಯಿಂದ ಉಂಟಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ಮಾಡಿದೆ. ಈ ಕಾರಣಕ್ಕಾಗಿ, ರಾಜ್ಯ ಸರ್ಕಾರ ಕೇಂದ್ರದ ಸಹಾಯವನ್ನು ತೆಗೆದುಕೊಂಡಿದ್ದು, NDRF (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಸಿಬ್ಬಂದಿಯನ್ನು ಚಾರ್ಧಾಮ್ ಯಾತ್ರಾ ಮಾರ್ಗದಲ್ಲಿ ನಿಯೋಜಿಸಿದೆ. ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಸಂಧು ಈ ಮಾಹಿತಿ ನೀಡಿದ್ದಾರೆ.
ಮೇ 3 ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಗಂಗೋತ್ರಿ ಮತ್ತು ಯಮನೋತ್ರಿ ಧಾಮದ ಬಾಗಿಲು ತೆರೆದಾಗ ಚಾರ್ಧಾಮ್ ಯಾತ್ರೆ ಪ್ರಾರಂಭವಾಗಿತ್ತು. ಚಾರ್ಧಾಮ್ ಯಾತ್ರೆಯ ಆಡಳಿತದಿಂದ ಪಡೆದ ಮಾಹಿತಿಯ ಪ್ರಕಾರ, ಇದುವರೆಗೂ ಯಮುನೋತ್ರಿ ಮತ್ತು ಗಂಗೋತ್ರಿ ಧಾಮ್‌ನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ 29 ಯಾತ್ರಿಕರು ಸಾವನ್ನಪ್ಪಿದ್ದಾರೆ.
ಮೊದಲ ಬಾರಿಗೆ ಎನ್‌ಡಿಆರ್‌ಎಫ್ ನಿಯೋಜನೆ: ಚಾರ್‌ಧಾಮ್ ಯಾತ್ರೆಯಲ್ಲಿ ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ಎಸ್‌ಎಸ್ ಸಂಧು ಹೇಳಿದ್ದಾರೆ. ಅಗತ್ಯವಿದ್ದರೆ, ಎನ್‌ಡಿಆರ್‌ಎಫ್‌ನೊಂದಿಗೆ, ಸೇನಾ ಸಿಬ್ಬಂದಿಯ ಸಹಾಯವನ್ನೂ ತೆಗೆದುಕೊಳ್ಳಲಾಗುವುದು. ಆರಂಭದಲ್ಲಿ, ಎನ್‌ಡಿಆರ್‌ಎಫ್ ಅನ್ನು ಕೇದಾರನಾಥ ಮಾರ್ಗದಲ್ಲಿ ನಿಯೋಜಿಸಲಾಗಿದೆ. ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಉತ್ತರಾಖಂಡ್ ಚಾರ್ಧಾಮ್ ಯಾತ್ರೆ ಕೈಗೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸಹಾಯವಾಣಿಗಳಿಗೆ ಕರೆ ಮಾಡಿ: ಯಾವುದೇ ವಿಪತ್ತು ಅಥವಾ ಆರೋಗ್ಯ ಸಂಬಂಧಿತ ಸಮಸ್ಯೆಗಳ ಸಂದರ್ಭದಲ್ಲಿ, ಯಾತ್ರಾರ್ಥಿಗಳು ಈ ಟೋಲ್-ಫ್ರೀ ಸಂಖ್ಯೆಗಳನ್ನು ಸಂಪರ್ಕಿಸಬಹುದು: 1070 ಮತ್ತು 1077ಕ್ಕೆ ಕರೆ ಮಾಡಿ ಸಹಾಯ ಪಡೆಯಲು ಮನವಿ ಮಾಡಲಾಗಿದೆ.
2013ರ ಭೀಕರ ಪ್ರವಾಹ ದುರಂತ: ಇದರ ಬಗ್ಗೆ ಮಾತನಾಡಿರುವ ಹಿರಿಯ ಪತ್ರಕರ್ತ ಹಾಗೂ ಸುಂದರ್ ಲಾಲ್ ಬಹುಗುಣ ಅವರ ಪುತ್ರ ರಾಜೀವ್ ನಯನ್ ಬಹುಗುಣ, ಕಳೆದ 10 ವರ್ಷಗಳಲ್ಲಿ ಚಾರಧಾಮ್ ಯಾತ್ರೆ ಟ್ರೆಂಡ್ ಆಗಿ ಬದಲಾಗಿದೆ. 2013ರಲ್ಲಿ ಸಂಭವಿಸಿದ ಪ್ರವಾಹ ದುರಂತದ ಬಳಿಕ ಅನೇಕರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಭೇಟಿ ನೀಡ್ತಿದ್ದು, ಇದೀಗ ಎಲ್ಲವೂ ಬದಲಾಗಿದೆ.
ಇಷ್ಟೊಂದು ದೊಡ್ಡ ಮಟ್ಟದ ಪ್ರವಾಹ ಸಂಭವಿಸಿದ ಬಳಿಕ ಕೇದಾರನಾಥ ದೇಗುವ ಸುರಕ್ಷಿತವಾಗಿ ಉಳಿದುಕೊಂಡಿರುವುದು ಸಹ ದೇಶ-ವಿದೇಶದ ಭಕ್ತರಲ್ಲಿ ದೊಡ್ಡ ಪ್ರಶ್ನೆಯಾಗಿ ಉದ್ಭವವಾಗಿತ್ತು. ಹೀಗಾಗಿ, ಜನರಲ್ಲಿ ನಂಬಿಕೆ ಸಹ ಹೆಚ್ಚಾಗಿ, ಕೇದಾರನಾಥಕ್ಕೆ ಬರುವ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಕೇದಾರನಾಥ ದೇವಾಲಯದ ಮೇಲೆ ಚಿತ್ರಗಳು ಸಹ ನಿರ್ಮಾಣಗೊಂಡಿದ್ದು, ಭಕ್ತರ ಮೇಲೆ ಹೆಚ್ಚಿನ ಪರಿಣಾಮ ಬೀರಿವೆ.ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಪ್ರಮುಖರು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕಾಗಿ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದಾರೆ.
ಇದನ್ನು ಓದಿ:ಹೈದರಾಬಾದ್ ರೀತಿ ಗುಜರಾತ್ನಲ್ಲೂ ಮರ್ಯಾದಾ ಹತ್ಯೆ.. ಯುವತಿಯ ಅಣ್ಣನಿಂದ ಪ್ರಿಯಕರನ ಮೇಲೆ ಹಲ್ಲೆ, ಕೊಲೆ!