ನವದೆಹಲಿ: ಚಂಡೀಗಢ ಬಾಲಕಿಯರ ಹಾಸ್ಟೆಲ್‌ನಿಂದ ಆಕ್ಷೇಪಾರ್ಹ ವೀಡಿಯೊಗಳನ್ನು ವೈರಲ್ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ನಡೆದಿದ್ದು, ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಾಲಕಿಯರ ಹಾಸ್ಟೆಲ್ ವಾರ್ಡನ್ ರಾಜ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಲಾಗಿದೆ. ಸದ್ಯ ವಿಶ್ವವಿದ್ಯಾನಿಲಯವನ್ನು ಶನಿವಾರದವರೆಗೆ ಬಂದ್ ಮಾಡಲಾಗಿದೆ.
ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೊಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಹಿಮಾಚಲ ಪ್ರದೇಶದ ಇಬ್ಬರು ಯುವಕರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ಇವರಿಬ್ಬರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಿಗೆ ಪರಿಚಿತರು ಎಂದು ಹೇಳಲಾಗುತ್ತಿದೆ. ಹುಡುಗರಿಗೆ ವೀಡಿಯೊ ಕಳುಹಿಸಿದ ವಿವಿ ವಿದ್ಯಾರ್ಥಿನಿ ಸೇರಿದಂತೆ ಮೂವರನ್ನು ಈ ಪ್ರಕರಣದಲ್ಲಿ ಬಂಧಿಸಿದಂತಾಗಿದೆ.
ಇಬ್ಬರು ಆರೋಪಿಗಳನ್ನು ಸನ್ನಿ ಮೆಹ್ತಾ ಮತ್ತು ರಂಕಜ್ ವರ್ಮಾ ಎಂದು ಗುರುತಿಸಲಾಗಿದ್ದು, ಇವರನ್ನು ಭಾನುವಾರ ಶಿಮ್ಲಾದಲ್ಲಿ ಬಂಧಿಸಲಾಗಿದೆ. ಹಿಮಾಚಲ ಪೊಲೀಸರು ಮೊದಲು ಇಬ್ಬರೂ ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪಂಜಾಬ್ ಪೊಲೀಸ್ ತಂಡಕ್ಕೆ ಹಸ್ತಾಂತರಿಸಿದೆ.
ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಹಲವಾರು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೊಗಳನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಆದರೆ ವಿಶ್ವವಿದ್ಯಾನಿಲಯ ಆಡಳಿತ ಮಂಡಳಿಯು ಈ ಆರೋಪಗಳನ್ನು ಅಲ್ಲಗಳೆದಿದ್ದು, ಬಂಧಿತ ವಿದ್ಯಾರ್ಥಿನಿಯ ವೀಡಿಯೊ ಮಾತ್ರ ಶೇರ್ ಆಗಿದೆ ಎಂದು ಹೇಳಿದೆ.
ಆಕ್ಷೇಪಾರ್ಹ ವೀಡಿಯೊಗಳ ಕಾರಣದಿಂದ ಮಹಿಳಾ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳನ್ನು ವಿವಿ ಆಡಳಿತ ಮಂಡಳಿ ಅಲ್ಲಗಳೆದಿದೆ.
ಬಂಧಿತನಾಗಿರುವ ಸನ್ನಿ ಶಿಮ್ಲಾ ಜಿಲ್ಲೆಯ ರೋಹ್ರು ನಿವಾಸಿ. ಆರೋಪಿ ಶಿಮ್ಲಾದ ಸಂಜೌಲಿ ಕಾಲೇಜಿನಲ್ಲಿ ಬಿಎ ವರೆಗೆ ಓದಿದ್ದಾನೆ. ಈತ ಪ್ರಸ್ತುತ ತನ್ನ ಸಹೋದರನೊಂದಿಗೆ ರೋಹ್ರುನಲ್ಲಿರುವ ಬಿಸ್ಕತ್ತು ಮತ್ತು ಕೇಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಪ್ರಕರಣದಲ್ಲಿ ಬಂಧಿತನಾದ ಮತ್ತೋರ್ವ ಆರೋಪಿ 31 ವರ್ಷದ ರಂಕಜ್ ವರ್ಮಾ ಶಿಮ್ಲಾದ ಥಿಯೋಗ್ ನಿವಾಸಿಯಾಗಿದ್ದು, ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಾನೆ.
ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಆತ್ಮಹತ್ಯಾ ಪ್ರಯತ್ನಗಳು ನಡೆದಿಲ್ಲ ಮತ್ತು ಆರೋಪಿ ವಿದ್ಯಾರ್ಥಿನಿಯು ತನ್ನ ಸ್ವಂತ ರೆಕಾರ್ಡಿಂಗ್‌ಗಳನ್ನು ತನ್ನ ಗೆಳೆಯನಿಗೆ ಕಳುಹಿಸಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ವೀಡಿಯೊಗಳು ಇಲ್ಲಿಯವರೆಗೆ ಕಂಡುಬಂದಿಲ್ಲ ಎಂದು ಪೊಲೀಸರು ಪದೇ ಪದೇ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಚಂಡೀಗಢ ವಿವಿ ವಿಡಿಯೋ ಲೀಕ್ ಪ್ರಕರಣಕ್ಕೆ ಟ್ವಿಸ್ಟ್.. ಆರೋಪಿ ಯುವತಿ ಬಗ್ಗೆ ಪೊಲೀಸರು ಹೇಳಿದ್ದಿಷ್ಟು