ನವದೆಹಲಿ: ಮಧ್ಯ ಪ್ರದೇಶ ಚುನಾವಣೆಯಲ್ಲಿ 19 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್ ಕೇವಲ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಅವರೊಂದಿಗೆ ಕೇಸರಿ ಪಾಳಯಕ್ಕೆ ಬಂದಿದ್ದ ಹಲವು ಶಾಸಕರು ಗೆಲುವಿನ ನಗೆ ಬೀರಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾಗೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿತ್ತು. ಬಿಜೆಪಿಗೆ ಬಹುಮತ ತಂದುಕೊಡುವುದರ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಜೊತೆಗೆ, ತಾನು ಕಾಂಗ್ರೆಸ್ನಿಂದ ಬಿಜೆಪಿಗೆ ಸೇರಿರುವುದಕ್ಕೆ ಮತದಾರರ ಒಪ್ಪಿಗೆ ಕೂಡಾ ಪಡೆಯಬೇಕಿತ್ತು.
ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದಾಗ, ಅವರೊಂದಿಗೆ 22 ಶಾಸಕರು ಬಂದಿದ್ದರು. ಸಿಂಧಿಯಾ ಪರವಾಗಿರುವ 19 ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತರೆ, 13 ಅಭ್ಯರ್ಥಿಗಳು ಗೆದ್ದಿದ್ದಾರೆ. ಇದು ಅವರ ಸ್ಥಾನವನ್ನು ಬಲಪಡಿಸಿದೆ.
ಚಂಬಲ್ ಪ್ರಾಂತ್ಯದ ಬಹುಪಾಲು ಶಾಸಕರು ಪಕ್ಷಾಂತರ ಮಾಡಿದ್ದರು. ಚಂಬಲ್‌ನಲ್ಲಿ ಬಂಡಾಯ ಮನೋಭಾವವನ್ನು ಹುರಿದುಂಬಿಸಲಾಗುತ್ತಿದೆ ಎಂಬುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಚಂಬಲ್‌ನ 16 ಸ್ಥಾನಗಳಲ್ಲಿ ಉಪಚುನಾವಣೆ ನಡೆಯಿತು. ಈ ಪೈಕಿ ಕಾಂಗ್ರೆಸ್ 7 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ನಿಂದ ಬಂದು ಬಿಜೆಪಿಯಿಂದ ಸ್ಪರ್ಧಿಸಿರುವ 8 ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಗಳಿಸಿದ್ದಾರೆ.