ನವದೆಹಲಿ: ತಮಿಳುನಾಡಿನ ಕೊಯಮತ್ತೂರಿನ ಕಾರು ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ಕೇಂದ್ರ ಸರ್ಕಾರ ವಹಿಸಿದೆ. ಸ್ಫೋಟದಲ್ಲಿ ಭಯೋತ್ಪಾದನೆಯ ನಂಟು, ನೆರಳು ಗೋಚರಿಸಿದ್ದು ಸ್ಟಾಲಿನ್ ಸರ್ಕಾರ ನಿನ್ನೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಲು ಶಿಫಾರಸು ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಶೀಘ್ರವಾಗಿ ಪ್ರಕರಣ ಬೇಧಿಸಲು ಸೂಚಿಸಿದೆ.
ಪ್ರಕರಣವೇನು?: ಕೊಯಮತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಅ.23 ರಂದು ಕಾರಿನಲ್ಲಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟವಾಗಿತ್ತು. ಇದರಲ್ಲಿ ಓರ್ವ ಮೃತಪಟ್ಟಿದ್ದ. ಪ್ರಕರಣದಲ್ಲಿ ಭಯೋತ್ಪಾದಕರ ಕರಿನೆರಳು ಕಂಡು ಬಂದಿದ್ದು ಯುಎಪಿಎ ಕಾಯ್ದೆಯಡಿ ಕೇಸು ದಾಖಲಿಸಿಕೊಂಡು 6 ಜನರನ್ನು ಪೊಲೀಸರು ಬಂಧಿಸಿದ್ದರು.
ಮೃತಪಟ್ಟ ವ್ಯಕ್ತಿ ಇಂಜಿನಿಯರಿಂಗ್ ಪದವೀಧರನಾಗಿದ್ದು, 2019 ರಲ್ಲಿ ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಎನ್‌ಐಎ ಈ ಹಿಂದೆ ವಿಚಾರಣೆ ನಡೆಸಿತ್ತು. ಬಂಧಿತರ ನಿವಾಸಗಳ ಮೇಲೆ ವಿವಿಧೆಡೆ ದಾಳಿ ನಡೆಸಿದ ಎಸ್ಐಟಿ ತಂಡ ಶೋಧ ನಡೆಸಿ, ಸ್ಫೋಟಕಗಳನ್ನು ತಯಾರಿಸಲು ಬಳಸುವ 75 ಕೆಜಿ ಪೊಟ್ಯಾಷಿಯಂ ನೈಟ್ರೇಟ್, ಇದ್ದಿಲು, ಅಲ್ಯೂಮಿನಿಯಂ ಪೌಡರ್ ಮತ್ತು ಗಂಧಕ, ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ಅ. 31ರಂದು ಬಂದ್ಗೆ ಕರೆ ನೀಡಿದ ಬಿಜೆಪಿ, ಹಿಂದೂ ಸಂಘಟನೆಗಳು