ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ 6 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದರ ವಿರುದ್ಧ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅಪರಾಧಿಗಳಿಗೆ ನೀಡಿದ ವಿನಾಯಿತಿ ಆದೇಶವನ್ನು ಮರುಪರಿಶೀಲಿಸುವಂತೆ ಸರ್ಕಾರ ಕೋರಿದೆ.
ಮಾಜಿ ಪ್ರಧಾನಿ ಸೇರಿದಂತೆ 21 ಜನರ ಹತ್ಯೆಗೆ ಕಾರಣವಾಗಿದ್ದ ಪ್ರಕರಣದ ಅಪರಾಧಿಗಳ ಬಿಡುಗಡೆ ಮಾಡಲು ಆದೇಶಿಸಿದ ಸುಪ್ರೀಂ ಕೋರ್ಟ್ ನಿರ್ಧಾರ "ಕಾನೂನು ದೋಷದಿಂದ ಕೂಡಿದೆ" ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ. ಅಲ್ಲದೇ ಅಪರಾಧಿಗಳ ಬಿಡುಗಡೆ ವಿರುದ್ಧ ತನಗೆ ವಾದಿಸಲು ನ್ಯಾಯಾಲಯದಿಂದ ಅನುಮತಿಯನ್ನು ಕೋರಿದೆ.
ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳಾದ ಮುರುಗನ್, ಸಂತನ್, ರಾಬರ್ಟ್ ಪಾಯಸ್, ನಳಿನಿ ಮತ್ತು ಜಯಕುಮಾರ್ರನ್ನು ಬಿಡುಗಡೆ ಮಾಡುವಂತೆ ಕಳೆದ ವಾರ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರಂತೆ ನವೆಂಬರ್ 12 ರಂದು ಎಲ್ಲಾ ಆರೋಪಿಗಳು ಜೈಲಿನಿಂದ ಖುಲಾಸೆಯಾಗಿದ್ದರು.
ಪ್ರಕರಣವೇನು?: ತಮಿಳುನಾಡಿನ ಪೆರಂಬದೂರಿನಲ್ಲಿ 1991ರ ಮೇ 21 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್‌ನಿಂದ ಕೊಲ್ಲಲ್ಪಟ್ಟರು. ಈ ಪ್ರಕರಣದಲ್ಲಿ ನಳಿನಿ, ಪೆರಾರಿವಾಲನ್, ಆರ್‌ಪಿ ರವಿಚಂದ್ರನ್, ಜಯಕುಮಾರ್, ಸಂತನ್, ಮುರುಗನ್, ರಾಬರ್ಟ್ ಪಯಸ್ ಬಂಧಿಸಲಾಗಿತ್ತು. ಅವರ ಮೇಲಿನ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿತ್ತು. 6 ಅಪರಾಧಿಗಳು 32 ವರ್ಷಗಳಿಂದ ಜೈಲಿನಲ್ಲಿದ್ದರು.
ಓದಿ: 'ನಮ್ಮನ್ನು ಭಯೋತ್ಪಾದಕರು, ಕೊಲೆಗಾರರೆಂದು ಬಿಂಬಿಸದೇ ಸಂತ್ರಸ್ತರಂತೆ ನೋಡಿ'