ನವದೆಹಲಿ: ರಸಗೊಬ್ಬರ ಬೆಲೆಯಲ್ಲಿ ಭಾರಿ ಮಟ್ಟದ ಏರಿಕೆಯಾಗಿದ್ದು, ರಸಗೊಬ್ಬರ ಕಂಪನಿಗಳು ಏಪ್ರಿಲ್ 1ರಿಂದಲೇ ದರ ಹೆಚ್ಚಳ ಮಾಡಿ ಮಹತ್ವದ ಆದೇಶ ಹೊರಹಾಕಿವೆ. ಇದರ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿ ಆದೇಶ ಹೊರಹಾಕಿದೆ.
ಯೂರಿಯಾಯೇತರ ರಸಗೊಬ್ಬರ ಮಾರಾಟ ಬೆಲೆಯಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡದಂತೆ ಕೇಂದ್ರ ಸರ್ಕಾರ ಇದೀಗ ರಸಗೊಬ್ಬರ ಕಂಪನಿಗಳಿಗೆ ನಿರ್ದೇಶನ ನೀಡಿದ್ದು, ಹಳೆ ಬೆಲೆಗೆ ಮಾರಾಟ ಮಾಡುವಂತೆ ಸೂಚನೆ ನೀಡಿದೆ. ಪ್ರತಿ 50 ಕೆಜಿ ಚೀಲಕ್ಕೆ 1,200 ರೂ ಇದ್ದ ಡಿಎಪಿ 1900 ರೂ ಆಗಿದ್ದು, ಇದರಿಂದ ರೈತರಿಗೆ ದೊಡ್ಡ ಮಟ್ಟದ ಶಾಕ್ ಆಗಿದೆ.
ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ರಸಗೊಬ್ಬರ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರಮುಖವಾಗಿ ಡಿಎಪಿ, ಎಂಒಪಿಒ ಮತ್ತು ಎನ್ಪಿಕೆಯಂತಹ ಗೊಬ್ಬರಗಳ ದರದಲ್ಲಿ ಏರಿಕೆ ಮಾಡಿ ಕಂಪನಿಗಳು ಆದೇಶ ಹೊರಡಿಸಿದ್ದವು. ಆದರೆ ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು.
ಇದೀಗ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಂಪನಿಗಳು ಸಮ್ಮತಿ ಸೂಚಿಸಿವೆ ಎಂದು ರಸಗೊಬ್ಬರ ರಾಜ್ಯ ಖಾತೆ ಸಚಿವ ಮನ್ಸೂಖ್ ಮಾಂಡವೀಯ ತಿಳಿಸಿದ್ದಾರೆ. ಹೀಗಾಗಿ ಕಂಪನಿಗಳು ಹಳೆ ದರದಲ್ಲೇ ರಸಗೊಬ್ಬರ ಮಾರಾಟ ಮಾಡಬೇಕಾಗಿದೆ. ಕೆಲವು ಖಾಸಗಿ ಕಂಪನಿಗಳು ಡಿಎಪಿ ಬೆಲೆಯನ್ನು ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಪ್ರತಿ ಚೀಲಕ್ಕೆ ₹ 1,700ಕ್ಕೆ ಹೆಚ್ಚಿಸಿದ್ದು, ಇದು ಆತಂಕಕ್ಕೆ ಕಾರಣವಾಗಿತ್ತು.