ನವದೆಹಲಿ: ಬೇಳೆ ಕಾಳುಗಳ ಬೆಲೆ ಏರಿಕೆ ನಿಯಂತ್ರಣ ವಿಷಯವಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಮಹತ್ವದ ನಿರ್ದೇಶನ ನೀಡಿದೆ. ಮುಖ್ಯವಾಗಿ, ತೊಗರಿ ಮತ್ತು ಉದ್ದು ಕಾಳುಗಳನ್ನು ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಅಲ್ಲದೇ, ಈ ಬೇಳೆ ಕಾಳುಗಳ ಕಳಪೆ ಪೂರೈಕೆ ಮತ್ತು ಏರುತ್ತಿರುವ ಬೆಲೆ ಕಾರಣದಿಂದ ಅವುಗಳ ಮೇಲೆ ದಾಸ್ತಾನಿನ ಮೇಲೆ ಮಿತಿಗಳನ್ನು ಹೇರಲು ಕೇಂದ್ರ ಒತ್ತಾಯಿಸಿದೆ.
ಬುಧವಾರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಎಲ್ಲ ರಾಜ್ಯಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಉನ್ನತ ಮಟ್ಟದ ಸಭೆ ನಡೆಸಿತು. ಈ ಸಭೆಯಲ್ಲಿ ಒಣ ಕಡಲೆಯಂತಹ ಇತರ ಬೇಳೆಕಾಳುಗಳ ಸೇವನೆಗೂ ಜನರನ್ನು ಉತ್ತೇಜಿಸಿಲು ಗಮನಹರಿಸಬೇಕೆಂದು ತಿಳಿಸಲಾಗಿದೆ. ತೊಗರಿ ಹಾಗೂ ಉದ್ದು ಉತ್ಪಾದನೆಯಲ್ಲಿ ಕೊರತೆಯಾಗಿದೆ. ಇದರ ಪರಿಣಾಮ ಇವುಗಳ ಬೆಲೆ ಏರಿಕೆ ಮತ್ತು ದಾಸ್ತಾನಿಗೆ ಕಾರಣವಾಗಿದೆ. ಜನರು ಇತರ ಬೇಳೆಕಾಳುಗಳನ್ನು ಸೇವಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದೆ.
ತೊಗರಿ ಉತ್ಪಾದನೆಯು 13 ಪ್ರತಿಶತದಷ್ಟು ಕೊರತೆ ಕಂಡಿದೆ. ಉದ್ದು ಉತ್ಪಾದನೆಯಲ್ಲೂ ಕುಂಠಿತ ಕಂಡುಬಂದಿದೆ. ಇದು ಬೇಳೆ ಕಾಳುಗಳ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಬೆಲೆ ಏರಿಕೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ವ್ಯಾಪಾರಿಗಳು ಮತ್ತು ದೊಡ್ಡ ಚಿಲ್ಲರೆ ವ್ಯಾಪಾರಿಗಳು ಸೇರಿಕೊಂಡು ಕಾಳಸಂತೆ ಮೂಲಕ ದಾಸ್ತಾನು ಮಾಡುವುದೂ ಇದಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ದೆಹಲಿ ಮತ್ತು ತಮಿಳುನಾಡು ಎರಡು ರಾಜ್ಯಗಳಲ್ಲಿ ತೊಗರಿ ಬೆಲೆಯಲ್ಲಿ ಹಲವು ಪಟ್ಟು ಏರಿಕೆ ಕಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ತೊಗರಿ ಬೇಳೆಗೆ ಕೆಜಿಗೆ 111 ರೂ.ಗಳಾಗಿದ್ದರೆ, ದೆಹಲಿಯಲ್ಲಿ ಕೆಜಿಗೆ 149 ರೂ. ಬೆಲೆ ಇದೆ. ಮುಖ್ಯವಾಗಿ, ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿಸುವ ಕಾರಣದಿಂದ ಬೆಲೆ ಏರುತ್ತಿದೆ ಎಂದು ಸಭೆಯಲ್ಲಿ ಸರ್ವಾನುಮತದ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಗ್ರಾಹಕರ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಅವರು ಕಾಳಧನಿಗಳು ಮತ್ತು ಕಾರ್ಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿದರು.
ತೊಗರಿ, ಉದ್ದು ಮೇಲಿನ ಬೇಡಿಕೆ ಕಡಿಮೆ ಮಾಡಲು ಹಾಗೂ ಅವುಗಳ ಬೆಲೆಗಳು ನಿಯಂತ್ರಣಕ್ಕೆ ಒಣಕಡಲೆಯಂತಹ ಇತರ ವಿವಿಧ ಬೇಳೆಕಾಳುಗಳನ್ನು ಸೇವಿಸುವತ್ತ ಗ್ರಾಹಕರು ತಮ್ಮ ಗಮನ ಬದಲಾಯಿಸಲು ಪ್ರೋತ್ಸಾಹಿಸುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ. ಮತ್ತೊಂದೆಡೆ, ಜೂನ್ 2ರಂದು ಸರ್ಕಾರವು ತೊಗರಿ ಮತ್ತು ಉದ್ದು ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದ್ದು, ಇದು ಅಕ್ಟೋಬರ್ 31ರವರೆಗೆ ಜಾರಿಯಲ್ಲಿ ಇರಲಿದೆ.
ಈ ಆದೇಶದ ಪ್ರಕಾರ ಪ್ರತಿ ಬೇಳೆಕಾಳುಗಳಿಗೆ ಪ್ರತ್ಯೇಕವಾಗಿ ದಾಸ್ತಾನಿನ ಮಿತಿ ವಿಧಿಸಲಾಗಿದೆ. ಸಗಟು ವ್ಯಾಪಾರಿಗಳಿಗೆ 200 ಮಿಲಿಯನ್ ಟನ್, ಚಿಲ್ಲರೆ ವ್ಯಾಪಾರಿಗಳು ಮತ್ತು ಪ್ರತಿ ಚಿಲ್ಲರೆ ಅಂಗಡಿಯಲ್ಲಿ ತಲಾ 5 ಮಿಲಿಯನ್ ಟನ್ ಹಾಗೂ ದೊಡ್ಡ ಚಿಲ್ಲರೆ ವ್ಯಾಪಾರಿಗಳಿಗೆ ಡಿಪೋದಲ್ಲಿ 200 ಮಿಲಿಯನ್ ಟನ್ ವಿತಿ ಹಾಕಲಾಗಿದೆ. ಗಿರಣಿ (ಮಿಲ್ಲರ್ಸ್)ಗಾರರಿಗೆ ಕಳೆದ ಮೂರು ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಸಾಮರ್ಥ್ಯದ ಶೇ.25ಕ್ಕಿಂತ ಹೆಚ್ಚು ಇರಬಾರದು ಎಂದು ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: ತೊಗರಿ, ಭತ್ತ, ರಾಗಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳಿಗೆ MSP ಹೆಚ್ಚಿಸಿದ ಕೇಂದ್ರ ಸರ್ಕಾರ