ನವದೆಹಲಿ: ಭಾರತದಲ್ಲಿ ಕೋವಿಡ್ ಪ್ರಕರಣಗಳ ಭಾರಿ ಏರಿಕೆಯ ಮಧ್ಯೆ ವೈದ್ಯಕೀಯ ಕ್ಷೇತ್ರಗಳಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ. ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದು, ಕೈಗಾರಿಕಾ ಉದ್ದೇಶಗಳಿಗಾಗಿ ಆಕ್ಸಿಜನ್ ಪೂರೈಕೆ ಮಾಡದಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.
'ಅಮೂಲ್ಯ ಜೀವಗಳನ್ನು ಉಳಿಸಿ'
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ತಯಾರಕರು ಮತ್ತು ಪೂರೈಕೆದಾರರು ಕೈಗಾರಿಕಾ ಉದ್ದೇಶಗಳಿಗಾಗಿ ಆಮ್ಲಜನಕ ಸರಬರಾಜು ಮಾಡುವುದನ್ನು ನಿಷೇಧಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಕೋರಿದ್ದಾರೆ. ಈ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.
12 ರಾಜ್ಯಗಳೊಂದಿಗೆ ಸಭೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ವಿವಿಧ ಅಗತ್ಯತೆಗಳ ಕುರಿತು ನಿರ್ಧಾರ ಕೈಗೊಂಡಿದೆ. ಏಪ್ರಿಲ್ 22 ರಿಂದ ಕೈಗಾರಿಕಾ ವಲಯಗಳಿಗೆ ಆಕ್ಸಿಜನ್ ಸರಬರಾಜು ನಿಷೇಧ ಆದೇಶ ಜಾರಿಯಾಗಲಿದೆ.
ರಾಜ್ಯಗಳಿಗೆ ವಿತರಣೆಯಾಗಲಿದೆ 6,177 ಮೆಟ್ರಿಕ್ ಟನ್ ಆಮ್ಲಜನಕ
6,177 ಮೆಟ್ರಿಕ್ ಟನ್ ಆಮ್ಲಜನಕವನ್ನು ರಾಜ್ಯಗಳಿಗೆ ವಿತರಿಸಲು ಅಂತಿಮಗೊಳಿಸಲಾಗಿದೆ. ಇದರಲ್ಲಿ ಮಹಾರಾಷ್ಟ್ರವು ಬಹುಪಾಲು ಅಂದರೆ 1,500 ಮೆಟ್ರಿಕ್ ಟನ್ ಆಮ್ಲಜನಕವನ್ನು ಪಡೆಯಲಿದೆ. ಆನಂತರ ಉತ್ತರ ಪ್ರದೇಶಕ್ಕೆ 800 ಮೆಟ್ರಿಕ್ ಟನ್ ಹಾಗೂ ದೆಹಲಿಗೆ 350 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಲಾಗುವುದು. ಉತ್ತರಾಖಂಡ, ಆಂಧ್ರಪ್ರದೇಶ, ಮತ್ತು ತೆಲಂಗಾಣಕ್ಕೂ ಆಮ್ಲಜನಕ ವಿತರಿಸಲಾಗುವುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ವಿರುದ್ಧ ಹೋರಾಡಲು 'ಆಕ್ಸಿಜನ್ ಎಕ್ಸ್‌ಪ್ರೆಸ್' ಹಳಿಗೆ..
ಭಾರತಕ್ಕೆ ಕೊರೊನಾ ಅಪ್ಪಳಿಸುವ ಮೊದಲು ವೈದ್ಯಕೀಯ ವಲಯದಲ್ಲಿ ದೈನಂದಿನ ಆಮ್ಲಜನಕದ ಬಳಕೆ ಸುಮಾರು 1000-1200 ಮೆಟ್ರಿಕ್ ಟನ್ಗಳಷ್ಟಿತ್ತು. 2020ರ ಏಪ್ರಿಲ್ 15 ರಿಂದ ಈ ಪ್ರಮಾಣ 4,795 ಮೆಟ್ರಿಕ್ ಟನ್ಗೆ ಏರಿಕೆಯಾಗಿದೆ. ಹೀಗಾಗಿ ಕಳೆದ ವರ್ಷದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ ಎಂದು ಗೋಯಲ್ ತಿಳಿಸಿದ್ದಾರೆ.
ಆಕ್ಸಿಜನ್ ಟ್ಯಾಂಕರ್‌ಗಳನ್ನು ಹೊತ್ತುಯ್ಯುವ ಎಕ್ಸ್‌ಪ್ರೆಸ್ ರೈಲುಗಳ ವೇಗದ ಚಲನೆಗೆ ಗ್ರೀನ್ ಕಾರಿಡಾರ್ ಸ್ಥಾಪಿಸುವುದಾಗಿ ರೈಲ್ವೆ ಸಚಿವಾಲಯ ಹೇಳಿದೆ.