ಚಂಡೀಗಢ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗಷ್ಟೇ ಚಂಡೀಗಢಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಕೇಂದ್ರಾಡಳಿತ ಪ್ರದೇಶಕ್ಕೆ ಹಲವು ಉಡುಗೊರೆಗಳನ್ನು ನೀಡಿದ್ದರು. ಅಷ್ಟೇ ಅಲ್ಲ ಗೃಹ ಸಚಿವ ಅಮಿತ್ ಶಾ ಚಂಡೀಗಢ ನೌಕರರಿಗೆ ಕೇಂದ್ರ ಸೇವಾ ನಿಯಮಗಳು ಅನ್ವಯಿಸುತ್ತವೆ ಎಂದು ಘೋಷಿಸಿದ್ದರು.
ಕೇಂದ್ರ ಗೃಹ ಸಚಿವರ ಈ ಘೋಷಣೆ ಈಗ ಪಂಜಾಬ್ ನೂತನ ಸಿಎಂ ಭಗವಂತ ಮಾನ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ದೆಹಲಿಯಲ್ಲೂ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಮಾಡಿಕೊಳ್ಳುತ್ತಲೇ ಇದ್ದಾರೆ.
ದೆಹಲಿ ಸಿಎಂ ಹಾಗೂ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಜತೆ ಅಧಿಕಾರದ ವಿಚಾರದಲ್ಲಿ ಕಿತ್ತಾಟ ನಡೆಯುತ್ತಲೇ ಇರುತ್ತದೆ ಈಗ. ಈಗ ಅದು ಪಂಜಾಬ್ಗೂ ವಿಸ್ತರಿಸಿದಂತಿದೆ. ಯಾಕೆಂದರೆ, ಚಂಡೀಗಢ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಪಂಜಾಬ್ ಹಾಗೂ ಹರಿಯಾಣಗಳ ರಾಜಧಾನಿ ಆಗಿದೆ.
ಇಂತಹ ಹತ್ತು ಹಲವು ವಿಚಾರಗಳ ಮಧ್ಯ ಚಂಡೀಗಢಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವರು, ಚಂಡೀಗಢದ ನೌಕರರ ನಿವೃತ್ತಿ ವಯಸ್ಸನ್ನೂ ಹೆಚ್ಚಿಸುವುದಾಗಿ ಹೇಳಿದ್ದರು. ಅಮಿತ್ ಶಾ ಚಂಡೀಗಢ ಭೇಟಿ ವೇಳೆ ಮಾಡಿದ್ದ ಘೋಷಣೆಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲಿ ಕೇಂದ್ರ ಸೇವಾ ನಿಯಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಕೂಡಾ ಹೊರಡಿಸಿದೆ. ಈ ಹಿಂದೆ ಚಂಡೀಗಢದಲ್ಲಿ ಪಂಜಾಬ್‌ನ ಸೇವಾ ನಿಯಮಗಳು ಅನ್ವಯವಾಗುತ್ತಿದ್ದವು. ಇನ್ಮುಂದೆ ಅವು ಅಲ್ಲಿ ನಡೆಯುವುದಿಲ್ಲ.
ಈ ವಿಚಾರದಲ್ಲಿ ಪಂಜಾಬ್ ರಾಜಕೀಯವೂ ಬಿಸಿ ಬಿಸಿಯಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಅಮಿತ್ ಶಾ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಅದೇ ಸಮಯದಲ್ಲಿ ಕಾಂಗ್ರೆಸ್ ಶಾಸಕ ಸುಖಪಾಲ್ ಖೈರಾ ಕೂಡ ಪಂಜಾಬ್ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ ಎಂದು ಕೆಂಡಕಾರಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಬಿಜೆಪಿ ನಾಯಕರು, ಚಂಡೀಗಢ ಪಂಜಾಬ್ಗೆ ಸೇರಿದ್ದು, ಅದನ್ನು ಯಾರೂ ಕಳೆದುಕೊಂಡಿಲ್ಲವಲ್ಲ ಎಂದು ತಣ್ಣನೆ ಉತ್ತರ ನೀಡಿದ್ದಾರೆ. ಈ ಮಧ್ಯೆ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾತನಾಡಿದ್ದು ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ.
ಪಂಜಾಬ್ ಮತ್ತು ಹರಿಯಾಣಕ್ಕೆ ಶೇ.60 ಮತ್ತು ಶೇ.40ರ ಕೋಟಾ ಇಂದಿಗೂ ಚಂಡೀಗಢಕ್ಕೆ ಅನ್ವಯಿಸುತ್ತದೆ ಎಂದು ಖಟ್ಟರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಯಾರಿಗೂ ಏನೂ ನಷ್ಟವಾಗುತ್ತಿಲ್ಲವಲ್ಲ. ಅಷ್ಟಕ್ಕೂ ಚಂಡೀಗಢ ಕೇಂದ್ರಾಡಳಿತ ಪ್ರದೇಶ ಎಂಬ ಉತ್ತರವನ್ನ ಹರಿಯಾಣ ಸಿಎಂ ಕೊಟ್ಟಿದ್ದಾರೆ.
ಇದನ್ನು ಓದಿ:ಉಗ್ರರ ಅಟ್ಟಹಾಸ: ಗುಂಡಿನ ದಾಳಿಯಲ್ಲಿ ಐವರ ಸಾವು- 11ಕ್ಕೇರಿತು ಮೃತರ ಸಂಖ್ಯೆ!