ನವದೆಹಲಿ: ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ವಿದೇಶದಿಂದ ಹಣ ಪಡೆಯುವ ನಿಯಮವನ್ನು ಇನ್ನಷ್ಟು ಸರಳೀಕರಿಸಿದೆ. ಹೊಸ ನಿಯಮದ ಪ್ರಕಾರ ಅಧಿಕಾರಿಗಳಿಗೆ ಮಾಹಿತಿ ನೀಡದೇ ವಿದೇಶದಿಂದ 10 ಲಕ್ಷ ರೂಪಾಯಿವರೆಗೂ ಹಣ ವರ್ಗಾವಣೆ ಮಾಡಿಕೊಳ್ಳಬಹುದು.
ಇದಲ್ಲದೇ, ಈ ರೀತಿ ಪಡೆದುಕೊಂಡ ಹಣದ ಬಗ್ಗೆ 30 ದಿನಗಳೊಳಗಾಗಿ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಅವಧಿಯನ್ನೂ 90 ದಿನಗಳವರೆಗೆ ವಿಸ್ತರಿಸಲಾಗಿದೆ. ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ನಿಯಮಗಳು- 2022ರ ಹೊಸ ನಿಯಮಗಳ ಅಧಿಸೂಚನೆಯನ್ನು ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ರಾತ್ರಿ ಹೊರಡಿಸಿದೆ.
ವಿದೇಶಿ ಕೊಡುಗೆ (ನಿಯಂತ್ರಣ) ನಿಯಮಗಳು- 2011 ರ ನಿಯಮ 6 ರಲ್ಲಿ (ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ಹಣ ವರ್ಗಾವಣೆ) ನಮೂದಿಸಿದಂತೆ 1 ಲಕ್ಷ ರೂಪಾಯಿ ಜಾಗದಲ್ಲಿ 10 ಲಕ್ಷ, ಅವಧಿಗೆ ಸಂಬಂಧಿಸಿದಂತೆ 30 ದಿನದ ಬದಲು 3 ತಿಂಗಳು ಎಂದು ತಿದ್ದುಪಡಿ ಮಾಡಲಾಗಿದೆ.
ಹಿಂದಿನ ನಿಯಮವೇನು?: ಯಾವುದೇ ವ್ಯಕ್ತಿ ವಿದೇಶದಲ್ಲಿ ನೆಲೆಸಿರುವ ತನ್ನ ಸಂಬಂಧಿಕರಿಂದ ಒಂದು ವರ್ಷದಲ್ಲಿ 1 ಲಕ್ಷ ರೂಪಾಯಿಗಿಂತ ಹೆಚ್ಚು ಅಥವಾ ಅದಕ್ಕೆ ಸಮಾನವಾದ ವಿದೇಶಿ ಕೊಡುಗೆಯನ್ನು ಸ್ವೀಕರಿಸಿದರೆ ಆ ಬಗ್ಗೆ 30 ದಿನಗಳ ಒಳಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕಿತ್ತು.
ನಿಧಿಯನ್ನು ಸ್ವೀಕರಿಸಲು ಎಫ್‌ಸಿಆರ್‌ಎ ಅಡಿಯಲ್ಲಿ 'ನೋಂದಣಿ' ಅಥವಾ 'ಪೂರ್ವ ಅನುಮತಿ' ಪಡೆಯಲು ನಿಯಮ 9 ರ ಅಡಿಯಲ್ಲಿ ಅವಕಾಶ ನೀಡಲಾಗಿದೆ. ಇದರ ಪ್ರಕಾರ ವ್ಯಕ್ತಿ, ಸಂಸ್ಥೆ ಹಣ ಪಡೆದ ಬ್ಯಾಂಕ್ ವಿವರಗಳನ್ನು 30 ದಿನಗಳೊಳಗೆ ನೀಡಬೇಕಾಗಿತ್ತು. ಇದೀಗ ಹೊಸ ನಿಯಮ ಅದನ್ನು 45 ದಿನಕ್ಕೆ ವಿಸ್ತರಿಸಿದೆ.
ಘೋಷಣೆ ನಿಬಂಧನೆ ರದ್ದು: ಯಾವುದೇ ಎನ್‌ಜಿಒ ಅಥವಾ ವಿದೇಶಿ ನಿಧಿಯನ್ನು ಸ್ವೀಕರಿಸುವ ವ್ಯಕ್ತಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಅಂತಹ ಕೊಡುಗೆಗಳನ್ನು ಘೋಷಿಸಬೇಕಾದ ನಿಬಂಧನೆಯನ್ನೂ ಸಹ ತೆಗೆದುಹಾಕಲಾಗಿದೆ.
ಎಫ್‌ಸಿಆರ್‌ಎ ನಿಯಮಗಳನ್ನು ಕಠಿಣಗೊಳಿಸಿರುವ ಗೃಹ ಸಚಿವಾಲಯ, ಯಾವುದೇ ಎನ್ಜಿಒಗಳು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳದ ಹೊರತಾಗಿಯೂ ಬಂದ್, ಮುಷ್ಕರ ಅಥವಾ ರಸ್ತೆ ತಡೆಗಳಂತಹ ಕ್ರಿಯೆಯಲ್ಲಿ ತೊಡಗಿದ್ದರೆ ಅಂತಹ ಸಂಸ್ಥೆಗಳನ್ನು ರಾಜಕೀಯ ಸ್ವರೂಪದ ಸಂಸ್ಥೆಗಳೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ನಿಯಮ ಸೇರಿಸಿದೆ. ಇದರಲ್ಲಿ ರೈತ ಸಂಘಟನೆ, ವಿದ್ಯಾರ್ಥಿ, ಕಾರ್ಮಿಕರ ಸಂಘಟನೆಗಳು ಮತ್ತು ಜಾತಿ ಆಧಾರಿತ ಸಂಘಟನೆಗಳನ್ನು ತರಲಾಗಿದೆ.
ಇದನ್ನೂ ಓದಿ: 'ಮಹಾರಾಷ್ಟ್ರ ವ್ಯಕ್ತಿ ಹತ್ಯೆ ತಿರುಚಿದ ಪೊಲೀಸರು': ಸಂಸದೆ ನವನೀತ್ ರಾಣಾ ಗಂಭೀರ ಆರೋಪ