ತಿರುವನಂತಪುರ/ಕೇರಳ: ಚುನಾವಣೆ ಸಮಯದಲ್ಲಿ ಆರೋಪಗಳು ಮತ್ತು ವಿವಾದಗಳು ಸಾಮಾನ್ಯವಾಗಿ ಕೇಳಿಬರುತ್ತಿದ್ದು, ಕೇರಳ ವಿಧಾನಸಭಾ ಚುನಾವಣೆ ಸಹ ಇದರಿಂದ ಹೊರತಾಗಿಲ್ಲ.
ವಿಧಾನಸಭಾ ಸ್ಪೀಕರ್ ಮತ್ತು ಸಿಪಿಎಂ ಮುಖಂಡ ಪಿ.ಶ್ರೀರಾಮಕೃಷ್ಣನ್ ವಿರುದ್ಧ ಹೇಳಿಕೆ ಬಿಡುಗಡೆ ಮಾಡಿದ್ದು, ಅವರನ್ನು ವಿವಾದದಲ್ಲಿ ಸಿಲುಕಿಕೊಳ್ಳುವಂತೆ ಮಾಡಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹೇಳಿಕೆಯ ಪ್ರಕಾರ, ಸ್ಪೀಕರ್ ಅವರು ಓಮನ್‌ನ ಮಧ್ಯಪ್ರಾಚ್ಯ ಕಾಲೇಜಿನಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಶಾರ್ಜಾದಲ್ಲಿ ಅದೇ ಕಾಲೇಜಿನ ಶಾಖೆಯನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ತಮ್ಮ ಬಳಿ ಹೇಳಿದ್ದಾಗಿ ಬಾಯ್ಬಿಟ್ಟಿದ್ದಾರೆ. ಈ ಹೇಳಿಕೆಯನ್ನು ಇಟ್ಟುಕೊಂಡು ಶ್ರೀರಾಮಕೃಷ್ಣನ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಂದ್ರ ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎನ್ನಲಾಗ್ತಿದೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರು, ಮಾಧ್ಯಮಗಳಲ್ಲಿ ಬರುತ್ತಿರುವ ಆಪಾದನೆಗಳೆಲ್ಲವೂ ಆಧಾರರಹಿತ ಮತ್ತು ದಾರಿತಪ್ಪಿಸುವಂತಿವೆ. ಕೇಂದ್ರ ತನಿಖಾ ಸಂಸ್ಥೆಗಳು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳೊಂದಿಗೆ ಅನೇಕ ಮಾಹಿತಿಯನ್ನು ಬಿಡುಗಡೆ ಮಾಡುತ್ತವೆ ಎಂದಿದ್ದಾರೆ.
ಈ ಮಧ್ಯೆ, ಅಜೀಕ್‌ಕೋಡ್‌ನಲ್ಲಿರುವ ಯುಡಿಎಫ್ ಅಭ್ಯರ್ಥಿ ಕೆ.ಎಂ. ಶಾಜಿ, ಅಕ್ರಮ ಸಂಪತ್ತನ್ನು ಸಂಗ್ರಹಿಸಿದ್ದಾರೆ. 2011 ಮತ್ತು 2020 ರ ನಡುವೆ ಶಾಜಿಗೆ ಶೇ.166 ರಷ್ಟು ಅಕ್ರಮ ಆದಾಯ ಬಂದಿದೆ ಎಂದು ಸಂಸ್ಥೆಯೊಂದು ಹೇಳಿದೆ ಎನ್ನಲಾಗ್ತಿದೆ. ಆದರೆ ಅವರು ನನ್ನ ಹೆಸರಿನಲ್ಲಿ ಯಾವುದೇ ಅಕ್ರಮ ಆಸ್ತಿ ಇಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.
ಇತ್ತ ಚುನಾವಣೆಗೆ ಎರಡು ವಾರಗಳು ಬಾಕಿ ಇರುವಾಗ, ಹೆಚ್ಚಿನ ಸಂಖ್ಯೆಯಲ್ಲಿ ನಾಯಕರು ಪಕ್ಷವನ್ನು ತೊರೆಯುತ್ತಿರುವುದರಿಂದ ಕಾಂಗ್ರೆಸ್ ಬಹಳಷ್ಟು ಹಿನ್ನಡೆಗಳನ್ನು ಎದುರಿಸಬೇಕಾಗಬಹುದು. ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಎಂ. ಸುರೇಶ್ ಬಾಬು ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ ಮತ್ತು ಪಕ್ಷವು ರಾಷ್ಟ್ರಮಟ್ಟದಲ್ಲಿ ಮುನ್ನಡೆಸಲು ನಾಯಕರಿಲ್ಲದ ಸ್ಥಿತಿಯಲ್ಲಿದೆ. ಹೀಗಾಗಿ ಎಲ್‌ಡಿಎಫ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮತ್ತು ಒಟ್ಟಾಗಿ ಕೆಲಸ ಮಾಡಲು ಸಿದ್ಧ ಎಂದು ಸುರೇಶ್ ಬಾಬು ಹೇಳಿದ್ದಾರೆ.
ಬಿಜೆಪಿ-ಎನ್‌ಡಿಎಯ ಮೂವರು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳನ್ನು ತಿರಸ್ಕರಿಸಿರುವುದು ಕೇರಳದ ಬಿಜೆಪಿ ನಾಯಕತ್ವಕ್ಕೆ ದೊಡ್ಡ ಹೊಡೆತ ನೀಡಿದೆ.
ಗುರುವಾಯೂರ್ ಮತ್ತು ದೇವಿಕುಲಂನಲ್ಲಿ, ಇಲ್ಲಿಂದ ಸ್ಪರ್ಧಿಸಲು ಎನ್‌ಡಿಎ ಅಭ್ಯರ್ಥಿ ಇಲ್ಲದ ಕಾರಣ ಎಲ್‌ಡಿಎಫ್ ಅಥವಾ ಯುಡಿಎಫ್ ಎರಡೂ ಭಾಗವಲ್ಲದ ಅಭ್ಯರ್ಥಿಗಳನ್ನು ಬೆಂಬಲಿಸಲು ಬಿಜೆಪಿ ನಿರ್ಧರಿಸಿದೆ. ಅಲ್ಲಿ ಕ್ಷೇತ್ರದಲ್ಲಿ ತನ್ನದೇ ಅಭ್ಯರ್ಥಿಯನ್ನು ಸಹ ಹೊಂದಿಲ್ಲ. ಬಿಜೆಪಿಗೆ ಇಲ್ಲಿ ಯಾವುದೇ ಅಭ್ಯರ್ಥಿಗಳಿಲ್ಲದ ಕಾರಣ ಇಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಅಭ್ಯರ್ಥಿಗಳಿಗೆ ಮತಗಳು ನಿರ್ಣಾಯಕವಾಗಿವೆ.
ಗುರುವಾಯೂರ್‌ನಲ್ಲಿ ಬಿಜೆಪಿ ಸೋಶಿಯಲ್ ಜಸ್ಟೀಸ್ ಪಕ್ಷವನ್ನು ಬೆಂಬಲಿಸಲಿದೆ. ತಲಶೇರಿಯಲ್ಲಿ ಸ್ವತಂತ್ರ ಅಭ್ಯರ್ಥಿ ಸಿಒಟಿ ನಜೀರ್, ತಲಶೇರಿಯಲ್ಲಿ ತನಗೆ ಬಿಜೆಪಿಯ ಬೆಂಬಲ ಅಗತ್ಯವಿಲ್ಲ ಎಂದು ಬಹಿರಂಗವಾಗಿ ಘೋಷಿಸುತ್ತಿದ್ದಂತೆ, ಕೇರಳದ ತಲಶೇರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಯೋಜಿಸಿದ್ದ ಕೇಂದ್ರ ಗೃಹ ಸಚಿವ ಕ ಅಮಿತ್ ಶಾ ತಮ್ಮ ಪ್ಲಾನ್ ಬದಲಾಯಿಸಿದ್ದಾರೆ.