ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಗುರುವಾರ 24 ಬಂಡವಾಳ ಸ್ವಾಧೀನ ಪ್ರಸ್ತಾವನೆಗಳಿಗೆ ಅಗತ್ಯ ಅನುಮೋದನೆ ನೀಡಿದೆ. ಈ ಪ್ರಸ್ತಾವನೆಗಳಲ್ಲಿ ಭಾರತೀಯ ಸೇನೆಗೆ ಆರು, ವಾಯುಪಡೆಗೆ ಆರು, ನೌಕಾಪಡೆಗೆ 10 ಮತ್ತು ಕೋಸ್ಟ್ ಗಾರ್ಡ್‌ಗೆ ಎರಡು ಮೌಂಟೆಡ್ ಗನ್ ಸಿಸ್ಟಮ್ಸ್ ಉಪಕರಣಗಳು ಸೇರ್ಪಡೆಗೊಂಡಿವೆ.
ಒಟ್ಟು 84,328 ಕೋಟಿ ರೂ. ಗಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಹೊಸ ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆಗಳು, ದೀರ್ಘ-ಶ್ರೇಣಿಯ ಉನ್ನತ-ಸ್ಫೋಟಕ ಸಿಡಿತಲೆಗಳು, ಸಾಂಪ್ರದಾಯಿಕ ಸಿಡಿತಲೆಗಳು ಮತ್ತು ಸುಧಾರಿತ ಕಣ್ಗಾವಲು ವ್ಯವಸ್ಥೆಗಳಿಗೆ ವ್ಯಾಪ್ತಿಯನ್ನು ಹೆಚ್ಚಿಸುವ ಕಿಟ್‌ಗಳನ್ನು ಸೇರಿಸುವ ಮೂಲಕ ಭಾರತೀಯ ವಾಯುಪಡೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಗುರುವಾರ ಹೇಳಿದೆ.
ಯುದ್ಧ ವಾಹನಗಳು, ಲಘು ಟ್ಯಾಂಕ್‌ಗಳು ಮತ್ತು ಮೌಂಟೆಡ್ ಗನ್ ಸಿಸ್ಟಮ್‌ಗಳಂತಹ ಹೆಚ್ಚಿನ ಬಲ ಮತ್ತು ಉಪಕರಣಗಳೊಂದಿಗೆ ಭಾರತೀಯ ಸೇನೆಯನ್ನು ಸಜ್ಜುಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಸಚಿವಾಲಯ ತಿಳಿಸಿದೆ. ಈ ಪಟ್ಟಿಯಲ್ಲಿ ನಮ್ಮ ಸೈನಿಕರಿಗೆ ಉತ್ತಮ ರಕ್ಷಣೆಯ ಮಟ್ಟದ ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳ ಖರೀದಿಯೂ ಸೇರಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನೌಕಾಪಡೆಯ ಆಂಟಿ-ಶಿಪ್ ಕ್ಷಿಪಣಿಗಳು, ಬಹು ಪಾತ್ರದ ಹಡಗುಗಳು ಮತ್ತು ಹೆಚ್ಚಿನ ಸಹಿಷ್ಣು ಸ್ವಾಯತ್ತ ವಾಹನಗಳ ಖರೀದಿಗೆ ರಕ್ಷಣಾ ಸಚಿವಾಲಯದ ಅನುಮೋದನೆು ನೌಕಾಪಡೆಯ ಸಾಮರ್ಥ್ಯ ಮತ್ತು ಸಮುದ್ರ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. 82.127 ಕೋಟಿ (ಶೇ. 97.4) ಮೌಲ್ಯದ 21 ಪ್ರಸ್ತಾವನೆಗಳಿಗೆ ಸ್ಥಳೀಯ ಮೂಲಗಳಿಂದ ಖರೀದಿಗೆ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರಾವಳಿ ಪ್ರದೇಶಗಳಲ್ಲಿ ಕಣ್ಗಾವಲು: ಡಿಎಸಿಯ ಈ ಅಭೂತಪೂರ್ವ ಉಪಕ್ರಮವು ಸಶಸ್ತ್ರ ಪಡೆಗಳನ್ನು ಆಧುನೀಕರಿಸುವುದಲ್ಲದೇ, 'ಆತ್ಮನಿರ್ಭರ್ ಭಾರತ್' ಗುರಿಯನ್ನು ಸಾಧಿಸಲು ರಕ್ಷಣಾ ಉದ್ಯಮಕ್ಕೆ ಗಣನೀಯ ಉತ್ತೇಜನವನ್ನು ನೀಡುತ್ತದೆ. ಸಚಿವಾಲಯದ ಪ್ರಕಾರ, ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ ಮುಂದಿನ ಪೀಳಿಗೆಯ ಕಡಲಾಚೆಯ ಗಸ್ತು ಹಡಗುಗಳ ಖರೀದಿಯು ಕರಾವಳಿ ಪ್ರದೇಶಗಳಲ್ಲಿ ಕಣ್ಗಾವಲು ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಹೆಚ್ಚಿಸುತ್ತದೆ.
ಜಂಟಿ ಸಮರಾಭ್ಯಾಸದ ಉದ್ದೇಶ: ಮತ್ತೊಂದು ಉಪಕ್ರಮದಲ್ಲಿ ಭಾರತ ಮತ್ತು ಜಪಾನ್ ತಮ್ಮ ಮೊದಲ ದ್ವಿಪಕ್ಷೀಯ ಮಿಲಿಟರಿ ಸಮರಾಭ್ಯಾಸವನ್ನು ಜಪಾನ್‌ನಲ್ಲಿ ನಡೆಸಲಿವೆ. 'ವೀರ್ ಗಾರ್ಡಿಯನ್ 23' ಹೆಸರಿನ ಈ ತಾಲೀಮನ್ನು ಜನವರಿ 16 ರಿಂದ 26, 2023 ರವರೆಗೆ ನಡೆಸಲಾಗುತ್ತದೆ. ಮೂಲಗಳ ಪ್ರಕಾರ, ಉಭಯ ದೇಶಗಳ ವಾಯುಪಡೆಗಳ ನಡುವೆ ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸುವುದು ಮತ್ತು ರಕ್ಷಣಾ ಸಹಕಾರವನ್ನು ಬಲಪಡಿಸುವುದು ಜಂಟಿ ಸಮರಾಭ್ಯಾಸದ ಉದ್ದೇಶವಾಗಿದೆ. ವಾಯುಪಡೆಯು ತನ್ನ ರಷ್ಯಾ ಮೂಲದ ಸುಖೋಯ್-30MKI ವಿಮಾನವನ್ನು ಪಶ್ಚಿಮ ವಾಯು ಕಮಾಂಡ್‌ನ ಸ್ಕ್ವಾಡ್ರನ್‌ಗೆ ಸೇರಿಸುತ್ತದೆ.
ಓದಿ: ಸಶಸ್ತ್ರ ಪಡೆಗಳಿಗೆ 28,732 ಕೋಟಿ ರೂ.: ಪ್ರಸ್ತಾವನೆ ಅನುಮೋದಿಸಿದ ರಕ್ಷಣಾ ಸಚಿವಾಲಯ