ಡೆಹ್ರಾಡೂನ್ (ಉತ್ತರಾಖಂಡ): 'ವುಮೆನಿಯಾ', ಇದು 2016 ರಲ್ಲಿ ಆರಂಭಗೊಂಡ ಉತ್ತರಾಖಂಡದ ಮೊದಲ ಮಹಿಳಾ ಮ್ಯೂಸಿಕಲ್ ಬ್ಯಾಂಡ್ ಆಗಿದ್ದು, ಕಳೆದ 5 ವರ್ಷಗಳಿಂದ ತಮ್ಮ ಸಂಗೀತದಿಂದ ದೇಶಾದ್ಯಂತ ಗುರುತಿಸಿಕೊಂಡಿದ್ದಾರೆ.
ಭಾರತ ಇಂದು ಆಜಾದಿ ಕಾ ಅಮೃತ್ ಮಹೋತ್ಸವ (75ನೇ ಸ್ವಾತಂತ್ರ್ಯ ದಿನ) ಆಚರಿಸುತ್ತಿದ್ದು, ಇದರ ಪ್ರಯುಕ್ತ ವುಮೆನಿಯಾ ಮ್ಯೂಸಿಕಲ್ ಬ್ಯಾಂಡ್‌ನ ಮಹಿಳೆಯರು ಡ್ರಮ್ ಮತ್ತು ಗಿಟಾರ್ ವಾದ್ಯಗಳೊಂದಿಗೆ ಹಾಡುತ್ತಿರುವ 'ಮಾ ತುಜೆ ಸಲಾಂ' ಹಾಡನ್ನೊಮ್ಮೆ ಕೇಳಿ.
ಸ್ವಾತಿ ಸಿಂಗ್, ವುಮೆನಿಯಾ ಬ್ಯಾಂಡ್‌ನ ಸಂಸ್ಥಾಪಕಿ. ಒಲಿದು ಬಂದಿದ್ದ ಸರ್ಕಾರಿ ಉದ್ಯೋಗ ತ್ಯಜಿಸಿ, ಸಂಗೀತ ಕಲಿತು ಇತರ ಮೂವರು ಯುವತಿಯರೊಂದಿಗೆ ಸ್ವಾತಿ ಸಿಂಗ್ 2016ರ ಮಾರ್ಚ್ 8 ರಂದು ಮ್ಯೂಸಿಕಲ್ ಬ್ಯಾಂಡ್ ಆರಂಭಿಸಿದರು. ಈ ಬ್ಯಾಂಡ್ನಲ್ಲಿ ಶಾಕಾಂಭರಿ ಕೊಟ್ನಾಳ, ವಿಜುಲ್ ಚೌಧರಿ, ಶ್ರೀವಿದ್ಯಾ ಕೊಟ್ನಾಳ ಇದ್ದು, ದೇಶದ ವಿವಿಧ ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
ಇವರಲ್ಲಿ ಸ್ವಾತಿ ಸಿಂಗ್ ಪ್ರಮುಖ ಗಾಯಕಿಯಾಗಿದ್ದಾರೆ. ಈ ಬ್ಯಾಂಡ್ನಲ್ಲಿ ತಾಯಿ-ಮಗಳು ಇರುವುದು ಮತ್ತೊಂದು ವಿಶೇಷ. ತಾಯಿ ಶಾಕಾಂಭರಿ ಕೊಟ್ನಾಳ ಅವರು ಗಿಟಾರ್ ನುಡಿಸಿದರೆ, 16 ವರ್ಷದ ಮಗಳು ಶ್ರೀವಿದ್ಯಾ ಕೊಟ್ನಾಳ ಡ್ರಮ್ ಬಾರಿಸುತ್ತಾರೆ.