ಚೆನ್ನೈ, ತಮಿಳುನಾಡು : ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದೇಶ ಸೇವೆ ಮಾಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ವಾಯುಪಡೆಯ ಹೆಲಿಕಾಪ್ಟರ್ ಪತನದಲ್ಲಿ ಹುತಾತ್ಮರಾಗಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಬುಧವಾರ ನಡೆದ ಹೆಲಿಕಾಪ್ಟರ್ ಪತನದ ಕುರಿತು ಹಲವು ಸಂಗತಿಗಳು ಬಹಿರಂಗವಾಗಿವೆ.
ಅವಘಡದ ವೇಳೆ ನಡೆದ ಸಂಗತಿಗಳ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೆಲಿಕಾಪ್ಟರ್ ಪತನಾಗಿದ್ದನ್ನು ನೋಡಿ, ನಾವು ಅಲ್ಲಿಗೆ ಹೋದೆವು. ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಜೀವಂತವಾಗಿದ್ದರು. ಅವರು ನನಗೆ ಕುಡಿಯಲು ನೀರು ಬೇಕೆಂದು ಕೇಳಿದರು. ತಕ್ಷಣ ಅವರನ್ನು ಕಂಬಳಿ ಮೇಲೆ ಮಲಗಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಅದಾದ ಸುಮಾರು ಮೂರು ಗಂಟೆಗಳ ನಂತರ ಪೊಲೀಸ್ ಅಧಿಕಾರಿಯೊಬ್ಬ ಬಂದು ಒಂದು ಫೋಟೋ ತೋರಿಸಿ, ಅವರು ಭಾರತದ ಅತ್ಯುನ್ನತ ಸೇನಾ ನಾಯಕ ಬಿಪಿನ್ ರಾವತ್ ಎಂದು ಹೇಳಿದರು. 'ಅವರೇ ನನಗೆ ನೀರು ಕೇಳಿದರು.
ದೇಶ ರಕ್ಷಣೆ ಮಾಡಿದ ಮಹಾನ್ ವ್ಯಕ್ತಿಯೊಬ್ಬರು, ನೀರು ಕುಡಿಯಲೂ ಆಗದ ಸ್ಥಿತಿಯಲ್ಲಿ ನೋಡಿದ ನಾನು ಬೆಚ್ಚಿಬಿದ್ದೆ. ರಾತ್ರಿಯಿಡೀ ನಿದ್ರೆಯೇ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಯಾದ ಶಿವಕುಮಾರ್ ಎಂಬ ಗುತ್ತಿಗೆದಾರ ಹೇಳಿಕೊಂಡಿದ್ದಾರೆ.
ಹೆಲಿಕಾಪ್ಟರ್ ಪತನವಾದ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿತು. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಹಲವಾರು ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅಪಘಾತದ ಸಮಯದಲ್ಲಿ ಮೂವರು ಬೆಂಕಿ ಹೊತ್ತಿಕೊಂಡು ಓಡುತ್ತಿದ್ದರು.
ಅವರು ಯಾರೆಂಬುದು ಆಗ ಗೊತ್ತಿರಲಿಲ್ಲ. ಸ್ವಲ್ಪ ಅದರಲ್ಲಿ ಇಬ್ಬರು ಬಿಪಿನ್ ರಾವತ್ ಮತ್ತು ವರುಣ್ ಸಿಂಗ್ ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇದನ್ನೂ ಓದಿ: ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಅವರಿಗೆ ಪತ್ನಿ-ಮಗಳಿಂದ ಭಾವೋದ್ವೇಗದ ಬೀಳ್ಕೊಡುಗೆ