ಪುದುಚೇರಿ: ಪಟಾಕಿಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಬೈಕ್ನಲ್ಲಿ ತೆರಳುತ್ತಿದ್ದಾಗ ಅವು ದಿಢೀರ್ ಹೊತ್ತಿ ಉರಿದ ಪರಿಣಾಮ, ಬೈಕ್ನಲ್ಲಿ ಸಾಗುತ್ತಿದ್ದ ತಂದೆ ಮತ್ತು ಆತನ 7 ವರ್ಷದ ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಬಳಿ ನಡೆದಿದೆ.
ಪುದುಚೇರಿಯ ಅರಿಯಂಕುಪ್ಪಂ ಪಟ್ಟಣದ ನಿವಾಸಿ ಕಲೈನೇಸನ್ (32) ಹಾಗೂ ಆತನ 7 ವರ್ಷದ ಮಗ ಮೃತರು. ಕಲೈನೇಸನ್ ಗುರುವಾರ ಮರಕ್ಕನಂನಿಂದ ಎರಡು ಗೋಣಿಚೀಲಗಳಲ್ಲಿ ಪಟಾಕಿಗಳನ್ನು ತೆಗೆದುಕೊಂಡು ತಮ್ಮ 7 ವರ್ಷದ ಮಗನೊಂದಿಗೆ ಪುದುಚೇರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಪಟಾಕಿ ಸಿಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಈ ದುರ್ಘಟನೆಯಲ್ಲಿ ಲಾರಿ ಮತ್ತಿತರ ವಾಹನಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ವಿಲ್ಲುಪುರಂ ಜಿಲ್ಲಾ ಮತ್ತು ಪುದುಚೇರಿ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.