ಮುಂಬೈ: ವಿಶೇಷ ಸಿಬಿಐ ನ್ಯಾಯಾಲಯವು ಎನ್‌ಸಿಪಿಯ ಹಿರಿಯ ಮುಖಂಡರಾದ ಸಂಜೀವ್ ಪಲಾಂಡೆ, ಕುಂದನ್ ಶಿಂಧೆ ಮತ್ತು ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಏಪ್ರಿಲ್ 11ರ ವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ಇವರನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರಿಕೊಂಡಿತ್ತು. 400 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಇವರೆಲ್ಲಾ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಜಾರಿ ನಿರ್ದೇಶನಾಲಯ(ಇಡಿ)ಯು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್, ಸಂಜೀವ್ ಪಲಾಂಡೆ ಮತ್ತು ಕುಂದನ್ ಶಿಂಧೆ ಅವರನ್ನು ಬಂಧಿಸಿದ್ರೆ, ಎನ್ಐಎ ಸಚಿನ್ ವಾಜೆ ಅವರನ್ನು ಬಂಧಿಸಿತ್ತು. ಅನಿಲ್ ದೇಶಮುಖ್ ಅವರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಪರಿಸ್ಥಿತಿಯಲ್ಲಿ ಅವರನ್ನು ದಾಖಲಿಸಲಾಗಿದೆ ಎಂಬುದನ್ನು ತಿಳಿಸುವಂತೆ, ಆಸ್ಪತ್ರೆ ಆಡಳಿತ ಮತ್ತು ಜೈಲು ಪ್ರಾಧಿಕಾರದಿಂದ ಸಿಬಿಐ ನ್ಯಾಯಾಲಯ ವರದಿಯನ್ನು ಕೇಳಿದೆ.
ಇದನ್ನೂ ಓದಿ: ಪಾಟ್ನಾದಲ್ಲಿದೆ ಡೀಸೆಲ್ ಎಂಜಿನ್ ಬುಲೆಟ್ : ಒಂದು ಲೀಟರ್ಗೆ 80 ಕಿ.ಮೀ ಮೈಲೇಜ್
ಕಳೆದ ವಾರ ಮುಂಬೈ ನ್ಯಾಯಾಲಯವೊಂದು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ನೀಡಿತ್ತು. ನಗರದ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸಲು ಅಂದಿನ ಗೃಹ ಸಚಿವ ದೇಶ್‌ಮುಖ್ ಪೊಲೀಸ್ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದ್ದರು ಎಂದು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ದೇಶಮುಖ್ ಆರೋಪಗಳನ್ನು ನಿರಾಕರಿಸಿದ್ದರು. ಆದರೆ ಬಾಂಬೆ ಹೈಕೋರ್ಟ್ ತನ್ನ ವಿರುದ್ಧ ಪ್ರಕರಣ ದಾಖಲಿಸಲು ಸಿಬಿಐಗೆ ನಿರ್ದೇಶನ ನೀಡಿದ ನಂತರ ಕಳೆದ ವರ್ಷ ಏಪ್ರಿಲ್‌ನಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಎನ್‌ಸಿಪಿಯ ಹಿರಿಯ ಮುಖಂಡ ಕುಂದನ್ ಶಿಂಧೆ ಮತ್ತು ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಕೂಡ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿದ್ದಾರೆ.