ನವದೆಹಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪ್ರಕರಣದಲ್ಲಿ ನಡೆದಿರುವ ಅಕ್ರಮದ ಕುರಿತು ಸಿಬಿಐ ವಿಚಾರಣೆ ನಡೆಸುತ್ತಿದ್ದು, ಇಂದು ಬೆಳಗ್ಗೆ ಜಮ್ಮು-ಕಾಶ್ಮೀರದ ಎಸ್ಎಸ್ಬಿ ಮಾಜಿ ಅಧ್ಯಕ್ಷ ಖಾಲಿದ್ ಜಹಾಂಗೀರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, 33 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಇಎಸ್ಐಸಿ ಆಸ್ಪತ್ರೆಯಲ್ಲಿ ಹಣ ದುರುಪಯೋಗ: ಬೆಂಗಳೂರು, ಹುಬ್ಬಳ್ಳಿಯಲ್ಲಿ ಸಿಬಿಐ ದಾಳಿ
ಜಮ್ಮು-ಕಾಶ್ಮೀರ ಸೇವಾ ಆಯೋಗದ ಮಾಜಿ ಪರೀಕ್ಷಾ ನಿಯಂತ್ರಕ ಅಶೋಕ್ ಕುಮಾರ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದಂತೆ ಹರಿಯಾಣದ ಕರ್ನಾಲ್, ಮಹೇಂದರ್ಗಢ, ರೇವಾರಿಯಲ್ಲಿ ದಾಳಿ ನಡೆಸಲಾಗಿದ್ದು, ಗುಜರಾತ್ನ ಗಾಂಧಿ ನಗರ, ನವದೆಹಲಿ, ಉತ್ತರಪ್ರದೇಶದ ಗಾಜಿಯಾಬಾದ್ ಹಾಗೂ ಬೆಂಗಳೂರಿನಲ್ಲೂ ಶೋಧಕಾರ್ಯ ನಡೆಸಲಾಗ್ತಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಈ ವರ್ಷದ ಆರಂಭದಲ್ಲಿ ಇನ್ಸ್ಪೆಕ್ಟರ್ ನೇಮಕಾತಿ ನಡೆಸಲಾಗಿತ್ತು. ಅದರ ಫಲಿತಾಂಶ ಜೂನ್ 4ರಂದು ಬಹಿರಂಗಗೊಂಡಿತ್ತು. ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದವು. ಹೀಗಾಗಿ, ತನಿಖೆ ನಡೆಸಲು ಸಿಬಿಐಗೆ ಪ್ರಕರಣ ಹಸ್ತಾಂತರ ಮಾಡಲಾಗಿದೆ. ಹೀಗಾಗಿ, ಅಧಿಕಾರಿಗಳು ಮಹತ್ವದ ಶೋಧಕಾರ್ಯ ನಡೆಸುತ್ತಿದ್ದಾರೆ. ಇದರಲ್ಲಿ ಬೆಂಗಳೂರು ಮೂಲದ ಖಾಸಗಿ ಕಂಪನಿಗಳ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದು, ಅಭ್ಯರ್ಥಿಗಳಿಂದ ಹಣ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.