ಪಾಟ್ನಾ (ಬಿಹಾರ): ಜಾತಿ ಗಣತಿ ನಡೆಸಲು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಳ್ಳಲಿವೆ ಎಂಬ ವಿಶ್ವಾಸವಿದ್ದು, ರಾಜ್ಯ ಮಟ್ಟದಲ್ಲಿ ಜಾತಿ ಗಣತಿ ನಡೆಸಲಾಗುವುದು ಹಾಗೂ ಅದನ್ನು ನಡೆಸುವ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಿತೀಶ್ ಕುಮಾರ್, ಭಾರತದಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಈ ಹಿಂದೆ ಕೂಡ 10 ಪಕ್ಷಗಳ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಜಾತಿ ಗಣತಿಗೆ ಒತ್ತಾಯಿಸಿತು. ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲ ಪಕ್ಷಗಳು ಜಾತಿ ಗಣತಿಯನ್ನು ನಡೆಸಲು ಕೈ ಜೋಡಿಸುತ್ತವೆ, ಇದಕ್ಕೆ ಒಮ್ಮತ ನೀಡುತ್ತವೆ ಎಂದು ಭಾವಿಸಿದ್ದೇನೆ ಎಂದರೆ.
ಇದನ್ನೂ ಓದಿ: ಜಾತಿ ಗಣತಿ ಸಮೀಕ್ಷೆ : ನ.18ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಮುಂದಿನ ಜನಗಣತಿ ವೇಳೆ ದೇಶದಲ್ಲಿ ಕೆಲ ರಾಜ್ಯಗಳು ಜಾತಿ ಗಣತಿ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ದವರು ಶೇ.50ಕ್ಕಿಂತ ಹೆಚ್ಚಿದ್ದಾರೆ. ಆದರೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾತ್ರ ಒಬಿಸಿ ವರ್ಗಕ್ಕೆ ಶೇ.27ರಷ್ಟು ಮೀಸಲಾತಿಯಿದೆ. ಹೀಗಾಗಿ ಜಾತಿ ಗಣತಿ ನಡೆಸಿದರೆ, ಒಬಿಸಿ ವರ್ಗದ ನಿಖರ ಅಂಕಿ - ಅಂಶ ಹೊರಬೀಳಲಿದೆ. ಬಳಿಕ ಒಬಿಸಿಗೆ ಮೀಸಲಾತಿ ಹೆಚ್ಚಿಸಬಹುದು ಎಂಬುದು ಇದರ ಉದ್ದೇಶವಾಗಿದೆ.