ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಕೋಕರ್ನಾಗ್ ಪ್ರದೇಶದ ನರ್ಪೋರಾ ವಟ್ನಾಡ್ ಗ್ರಾಮದ ಸುತ್ತಲೂ ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಇಂದು ಬೆಳಿಗ್ಗೆ ಮಿಲಿಟರಿ ಪಡೆಗಳು ಮುತ್ತಿಗೆ ಹಾಕಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಈ ಪ್ರದೇಶದಲ್ಲಿ ಪ್ರತಿ ಮನೆ ಮನೆಯ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ" ಎಂದು ಅವರು ಹೇಳಿದರು. ಸೇನೆಯ 19RR, 164 BN CRPF ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಪ್ರಾರಂಭಿಸಿದರು.
ಏತನ್ಮಧ್ಯೆ, ಒಂದು ತಿಂಗಳ ಹಿಂದೆ ಗಡೋಲ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿತ್ತು. ಇದರಲ್ಲಿ ಇಬ್ಬರು ಸೇನಾಧಿಕಾರಿಗಳು, ಒಬ್ಬ ಸೈನಿಕ ಮತ್ತು ಜಮ್ಮು ಮತ್ತು ಕಾಶ್ಮೀರ ಡಿಎಸ್‌ಪಿ ಹುತಾತ್ಮರಾಗಿದ್ದರು. ಒಂದು ವಾರದ ನಂತರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಹೀಗಾಗಿ, ಇಡೀ ನಾರ್ಪೋರಾ ವಟ್ನಾಡ್ ಗ್ರಾಮವು ಮಿಲಿಟರಿ ಪಡೆಯಿಂದ ಮುತ್ತಿಗೆ ಹಾಕಲ್ಪಟ್ಟಿದೆ. ಸಾಮಾನ್ಯ ಜನರ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.
ಜಮ್ಮುವಿನಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿ ಕಾವಲುಗಾರರ ಮೇಲೆ ಪಾಕಿಸ್ತಾನದ ರೇಂಜರ್‌ಗಳು ಗುಂಡು ಹಾರಿಸಿದ ನಂತರ, ಇಬ್ಬರು ಬಿಎಸ್‌ಎಫ್ ಸಿಬ್ಬಂದಿ ಗಾಯಗೊಂಡು ಒಂದು ದಿನದ ನಂತರ ಕಾಶ್ಮೀರದ ದಕ್ಷಿಣದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಅರ್ನಿಯಾ ಸೆಕ್ಟರ್‌ನ ವಿಕ್ರಮ್ ಪೋಸ್ಟ್‌ನಲ್ಲಿ ಮಂಗಳವಾರ ಬೆಳಿಗ್ಗೆ 8.15 ರ ಸುಮಾರಿಗೆ ಪಾಕಿಸ್ತಾನ್ ರೇಂಜರ್‌ಗಳು ಸೈನಿಕರ ಮೇಲೆ ಗುಂಡು ಹಾರಿಸಿದ್ದರು. ನಂತರ ಬಿಎಸ್‌ಎಫ್ ಯೋಧರು ಪ್ರತೀಕಾರವಾಗಿ ಗುಂಡು ಹಾರಿಸಿದ್ದಾರೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೇಳಿಕೆಯಲ್ಲಿ ತಿಳಿಸಿದೆ.
ಇಬ್ಬರು ಬಿಎಸ್‌ಎಫ್ ಸಿಬ್ಬಂದಿಗೆ ಬುಲೆಟ್ ತಗುಲಿ ಗಾಯಗಳಾಗಿದ್ದು, ತಕ್ಷಣವೇ ವೈದ್ಯಕೀಯ ನೆರವು ನೀಡಲಾಗಿದೆ. ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 25, 2021 ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ವಲಯಗಳಲ್ಲಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಕದನ ವಿರಾಮದ ಎಲ್ಲಾ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ.
ಇದನ್ನೂ ಓದಿ: ಮೂವರು ಅಧಿಕಾರಿಗಳ ಸಾವಿಗೆ ಪ್ರತೀಕಾರ: ಲಷ್ಕರ್ ಕಮಾಂಡರ್ ಉಝೈರ್ ಖಾನ್ ಸೇರಿ ಇಬ್ಬರು ಉಗ್ರರ ಹೆಡೆಮುರಿಕಟ್ಟಿದ ಸೇನೆ